ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಓಡಾಡಲು ಕಾರು ಕೊಟ್ಟಿಲ್ಲ ಎಂಬ ಆರೋಪಕ್ಕೆ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸಾಕ್ಷಿ ಸಹಿತ ಉತ್ತರಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೇಂದ್ರ ಬಿಜೆಪಿ ಸರ್ಕಾರಾದ ಬೃಹತ್ ಕೈಗಾರಿಕಾ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿರವರು ಕರ್ನಾಟಕ ರಾಜ್ಯ ಸರ್ಕಾರ ತಮಗೆ ಶಿಷ್ಟಾಚಾರಕ್ಕೆ ಅನುಗುಣವಾಗಿ ನಿಗದಿತ ಸಮಯದಲ್ಲಿ ಹೊಸ ಕಾರನ್ನು ನೀಡಲಿಲ್ಲ ಎಂದು ಆರೋಪಿಸಿರುತ್ತಾರೆ. ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಪಡೆದು ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ರಾಜ್ಯದ ಅಭಿವೃದ್ಧಿಗೆ ಇವರು ನೀಡಿರುವ ಕೊಡುಗೆ ಶೂನ್ಯ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಪ್ರಚಾರ ಪಡೆಯಲು ಮುಂದಾಗಿದ್ದಾರೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಅವರ ಅಪೇಕ್ಷೆಯಂತೆ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ವಾಹನ ಹಂಚಿಕೆ ಆಗಿರುತ್ತದೆ. ಮಂಡ್ಯ ಜಿಲ್ಲಾಧಿಕಾರಿಗಳು ಹೊಸ ಕಾರನ್ನು ಪಡೆಯಲು ಕೇಂದ್ರ ಸಚಿವರನ್ನು ಕೋರಿದ್ದು, ಧನುರ್ ಮಾಸದ ಕಾರಣ ನೀಡಿ ಸಂಕ್ರಾಂತಿಯ ನಂತರ ಹೊಸ ಕಾರು ಪಡೆಯುವುದಾಗಿ ತಿಳಿಸಿರುತ್ತಾರೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 04-11-2024 ರಲ್ಲಿ ಹೆಚ್.ಡಿ.ಕುಮಾರಸ್ವಾಮಿರವರ ಹೊಸ ವಾಹನದ ಪ್ರಸ್ತಾಪಕ್ಕೆ ಅನುಗುಣವಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿರುತ್ತಾರೆ. ಕರ್ನಾಟಕದ ಸುಮಾರು 6 ಸಂಸದರಿಗೆ ಆರ್ಥಿಕ ಮಿತಿಯೊಳಗೆ ವಾಹನಗಳನ್ನು ಖರೀದಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅದಕ್ಕೆ ಅನುಗುಣವಾಗಿ ವಾಹನ ಖರೀದಿ ಮಾಡಿ, ಹೊಸ ಕಾರು ಪಡೆಯಲು ಮಾಹಿತಿ ನೀಡಲಾಗಿರುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಹಿಂದಿನ ಇನ್ನೋವಾ ಕ್ರಿಸ್ಟಾ ಕಾರನ್ನು ಬಳಸಲು ಹೆಚ್.ಡಿ.ಕುಮಾರಸ್ವಾಮಿರವರು ನಿರಾಕರಿಸಿ ಹೊಸ ಇನ್ನೋವಾ ಹೈಕ್ರಾಸ್ ಕಾರಿಗೆ ಬೇಡಿಕೆ ಸಲ್ಲಿಸಿದ್ದು, KA 59 G 0099 ಕಾರು ಹಂಚಿಕೆ ಆಗಿರುತ್ತದೆ. ಇದರ ಜೊತೆಗೆ ಕೆಲವು ಸಿಬ್ಬಂದಿಯನ್ನು ಎರವಲು ಸೇವೆಯ ಮೇಲೆ ರಾಜ್ಯ ಸರ್ಕಾರದಿಂದ ಪಡೆದುಕೊಂಡಿರುತ್ತಾರೆ. ಆದರೆ ಇಂತಹ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು, ಸಿದ್ದರಾಮಯ್ಯರವರನ್ನು, ಡಿ.ಕೆ.ಶಿವಕುಮಾರ್ ರವರನ್ನು, ಕೃಷ್ಣ ಬೈರೇಗೌಡರವರನ್ನು, ಚೆಲುವರಾಯ ಸ್ವಾಮಿ ಮತ್ತು ಇತರರನ್ನು ಟೀಕಿಸುವ ಮೂಲಕ ತಮ್ಮ ನಾಯಕತ್ವಕ್ಕೆ ಅವರೇ ಮಸಿ ಬಳೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದ್ದಾರೆ.
ರಾಜ್ಯದ 2023ರ ವಿಧಾನಸಭೆಯ ಚುನಾವಣೆಯ ಫಲಿತಾಂಶದ ನಂತರ ಹೆಚ್.ಡಿ.ಕುಮಾರಸ್ವಾಮಿ ರವರು ಪದೇ ಪದೇ ವ್ಯಕ್ತಿಗತ ಟೀಕೆಗಳಿಗೆ ಮುಂದಾಗುವುದರ ಮೂಲಕ ತಮ್ಮ ಹತಾಶ ಭಾವನೆಯನ್ನು ತೋರುತ್ತಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿರುವ ಹೆಚ್.ಡಿ.ಕುಮಾರಸ್ವಾಮಿ ರವರು ತಮಗೆ ದೊರೆತಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ. ಇಂತಹ ಸಾರ್ವಜನಿಕ ಪ್ರಾಮುಖ್ಯತೆ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗುವ ಬದಲು, ಆರೋಗ್ಯಕರ ಚರ್ಚೆಗಳಿಗೆ ಒತ್ತು ನೀಡಿ ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ ಎಂಬುದಾಗಿ ತಿಳಿಸಿದ್ದಾರೆ.
BIG NEWS: ವಿಜಯಪುರದಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್ ಘಟಕ’ ಸ್ಥಾಪನೆ: ಸಚಿವ ಎಂ.ಬಿ ಪಾಟೀಲ್ ಘೋಷಣೆ
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer