ಬೆಂಗಳೂರು: ಬೆಂಗಳೂರು ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ಈ ಘಟನೆ ಶನಿವಾರ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು ಈ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಹೌದು ನಾವು ರೇಲ್ವೆ ಸ್ಟೇಷನ್, ಬಸ್ ಸ್ಟಾಂಡ್, ಸಿಗ್ನಲ್ ಬಳಿ ಸಾಮಾನ್ಯವಾಗಿ ಭಿಕ್ಷುಕರನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬ ವಿಶೇಷ ಚೇತನ ವ್ಯಕ್ತಿ ಕ್ಯೂ ಆರ್ ಕೋಡ್ ನಿಂದ ಟಿಕೆಟ್ ಪಡೆದು ಮೆಟ್ರೋ ಟ್ರೈನ್ ಅಲ್ಲಿ ಭೀಕ್ಷಾಟನೆ ಮಾಡಿದ್ದಾನೆ. ಸ್ಕಲ್ ಕ್ಯಾಪ್ ಧರಿಸಿದ ವಿಕಲಚೇತನ ವ್ಯಕ್ತಿಯೊಬ್ಬ ರೈಲಿನೊಳಗೆ ಒಬ್ಬ ಪ್ರಯಾಣಿಕನಿಂದ ಇನ್ನೊಬ್ಬನಿಗೆ ಭಿಕ್ಷೆ ಬೇಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಪ್ರಯಾಣಿಕರೊಬ್ಬರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಇದೀಗ ವೈರಲ್ ಆಗಿದೆ.
BMRCL ಮೂಲಗಳ ಪ್ರಕಾರ, ಇದು ಶನಿವಾರದ ಘಟನೆ ಎಂದು ಹೇಳಲಾಗಿದೆ. ಆದರೆ ನಿಖರವಾದ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಲು ತನಿಖೆ ಇನ್ನೂ ನಡೆಯುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.ಈ ವ್ಯಕ್ತಿ ಎಲ್ಲಿ ಹತ್ತಿದ್ದಾನೆ ಎಂದು ನಮಗೆ ಮಾಹಿತಿ ಇಲ್ಲ, ವ್ಯಕ್ತಿಯ ಕೂಡಲೇ ಪತ್ತೆ ಹಚ್ಚಲು ಆರಂಭಿಸುತ್ತೇವೆ ಎಂದು BMRCL ಅಧಿಕಾರಿಗಳು ಹೇಳಿದ್ದಾರೆ ಮೂಲಗಳು ತಿಳಿಸಿವೆ.