ಮಂಡ್ಯ : ಜಿಲ್ಲೆಯ ರೈತರಿಗೆ ಕಂಬೈಂಡ್ ಹಾರ್ವೆಸ್ಟರ್ ಯಂತ್ರಗಳ ಮೂಲಕ ಭತ್ತ ಹಾಗೂ ರಾಗಿ ಬೆಳೆಗಳ ಕಟಾವಿನ ಬಾಡಿಗೆ ದರ ನಿಗಧಿಯ ಬಗ್ಗೆ ಪತ್ರಿಕೆ ಹಾಗೂ ನಾಮಫಲಕಗಳಲ್ಲಿ ಹೆಚ್ಚು ಪ್ರಚಾರವಾಗಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಭೆ ನಡೆಸಿ ಮಾತನಾಡಿದರು.
2024 -25 ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ನೆರೆಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭತ್ತ ಕಂಬೈಂಡ್ ಹಾರ್ವೆಸ್ಟರ್ಗಳ ಬಾಡಿಗೆ ದರಗಳನ್ನು ನಿಗದಿಪಡಿಸಿದರು. ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,500 ರೂಗಳು, ಟೈರ್ (ಗ್ರೀಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2000 ರೂ, ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1,800 ರೂ ಹಾಗೂ ರಾಗಿ ಯಂತ್ರಕ್ಕೆ ಪ್ರತಿ ಗಂಟೆಗೆ 2,900 ರೂ ಗಳನ್ನು ನಿಗಧಿ ಪಡಿಸಿದರು.
ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ ಬೆಳೆಯ ಒಟ್ಟು ವಿಸ್ತೀರ್ಣ – 57,804 ಹೆಕ್ಟೇರ್, ರಾಗಿ-54,018 ಹೆಕ್ಟೇರ್ ಹಾಗೂ ಕಬ್ಬು ಬೆಳೆಯ ವಿಸ್ತೀರ್ಣವು – 40,361ಹೆಕ್ಟೇರ್ ಇದೆ ಎಂದರು.
ಕರ್ನಾಟಕ ರೈತ ಸುರಕ್ಷಾ -ಪ್ರಧಾನ ಮಂತ್ರಿ ಬಿಮಾ (ವಿಮಾ) ಯೋಜನೆ
ಕರ್ನಾಟಕ ರೈತ ಸುರಕ್ಷಾ -ಪ್ರಧಾನ ಮಂತ್ರಿ ಬಿಮಾ (ವಿಮಾ) ಯೋಜನೆಯು ಅತಿವೃಷ್ಟಿ/ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವು ಕಾರಣಗಳಿಂದ ಬೆಳಗಿನಷ್ಟ ಸಂಭವಿಸಿದ್ದರೆ ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದರಿಂದ ರೈತರಿಗೆ ಕೃಷಿಯಲ್ಲಿ ಆಧುನಿಕ ಬೇಸಾಯ ಪದ್ಧತಿಯನ್ನು ಹೆಚ್ಚಿನ ಬೆಲೆ ಪರಿಕರಗಳನ್ನು ಹಾಗೂ ಉನ್ನತ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಭೀಮಾ ಯೋಜನೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸುಚಿತ ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ (ಮಳೆಯಾಶ್ರಿತ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೋಂದಾಯಿಸಬಹುದಾಗಿರುತ್ತದೆ ಎಂದರು.
ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೋಂದಾಯಿಸಬಹುದಾಗಿರುತ್ತದೆ. ಪಾಂಡವಪುರ ತಾಲೂಕಿನ ಚಿನಕುರಳಿ, ಮೇಲುಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿ ಟಮೋಟ ಬೆಳೆಗೆ ವಿಮೆಗೆ ನೋಂದಾಯಿಸಬಹುದು.
ಬೇಸಿಗೆ ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೋಂದಾಯಿಸಬಹುದು ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯಲ್ಲಿ ಟಮೋಟ ಬೆಳೆಗೆ ನೋಂದಾಯಿಸಬಹುದು ಎಂದು ತಿಳಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
2024 -25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ನೀರಿನ ಮಿತ ಬಳಕೆ ಹಾಗೂ ಲಭ್ಯವಿರುವ ನೀರನ್ನು ಸಮರ್ಥ ಬಳಕೆ ಮಾಡುವಲ್ಲಿ ಅನುವಾಗುವಂತೆ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ಹಾಗೂ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಅರ್ಹ ಸಣ್ಣ/ ಅತಿ ಸಣ್ಣ ರೈತರಿಗೆ ಗರಿಷ್ಠ ಎರಡು ಹೆಕ್ಟರ್ ಪ್ರದೇಶದವರೆಗೆ ಶೇಕಡ 90% ರವರೆಗೂ ಸಹಾಯಧನ ನೀಡಲಾಗುವುದು. ಎರಡು ಹೆಕ್ಟರ್ ಮೇಲ್ಪಟ್ಟ ದೊಡ್ಡ ರೈತರಿಗೆ ಶೇಕಡ 45% ರಷ್ಟು ಸಹಾಯಧನ ನೀಡಲಾಗುತ್ತದೆ.
ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವಲ್ಲಿ ಕೃಷಿ ಇಲಾಖೆಯು ಮುಂದಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಗೆ ದಂಡ, ಶಿಕ್ಷೆ ವಿಧಿಸಿದ ICC
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut