ಬೆಂಗಳೂರು : “ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾ ಗಾಂಧಿ ಅವರು ಜಾರಿಗೆ ತಂದಿರುವ ಉಳುವವನೆ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ಹಾಗೂ ಯಾವುದೇ ಸರ್ಕಾರಗಳಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆಯಲ್ಲಿ ಶಿವಕುಮಾರ್ ಅವರು ಭಾಗವಹಿಸಿ ಮಾತನಾಡಿದರು.
“ಜವಹಾರ್ ಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದ ತನಕ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಒಂದೇ ಒಂದು ಯೋಜನೆಗಳನ್ನು ನಿಲ್ಲಿಸುವ ಶಕ್ತಿ, ಧೈರ್ಯ ಯಾರಿಗೂ ಬರಲಿಲ್ಲ” ಎಂದರು.
ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲ
ಚನ್ನಪಟ್ಟಣದ ಉಪಚುನಾವಣಾ ಸಭೆಯಲ್ಲಿ ಮಾತನಾಡುವಾಗ ಹಿರಿಯ ಮಹಿಳೆಯೊಬ್ಬರು ಇಂದಿರಾಗಾಂಧಿ ಅವರ ಪಿಂಚಣಿ ಯೋಜನೆಯನ್ನು ನೆನಪಿಸಿಕೊಂಡು ʼಮೊದಲಿಗೆ 40 ರೂಪಾಯಿ ಕೊಡುತ್ತಿದ್ದರುʼ ಎಂದು ತುಂಬಿದ ಸಭೆಯಲ್ಲಿ ಹೇಳಿದರು. ಜನರು ಅವರನ್ನು ಅನೇಕ ಜನಪರ ಯೋಜನೆಗಳಿಗಾಗಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಬ್ಯಾಂಕ್ ರಾಷ್ಟ್ರೀಕರಣದಿಂದ ದೇಶ ಆರ್ಥಿಕವಾಗಿ ಸಬಲವಾಯಿತು. ನೆಹರು ಅವರ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗಟ್ಟಾಗಿ ಇಟ್ಟಿದೆ” ಎಂದರು.
“ಬಡವರಿಗೆ ಭೂಮಿ ನೀಡಿದ ಕಾಂಗ್ರೆಸ್
“ಭಾರತ್ ಜೋಡೋ ಯಾತ್ರೆ ಸಂದರ್ಭ ಮೊಣಕಾಲ್ಮೂರು ಬಳಿ ಟೀ ಕುಡಿಯಲು ಬಿಡುವು ತೆಗೆದುಕೊಂಡಾಗ ಅಜ್ಜಿಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ನಿಂತಿದ್ದರು. ಆಗ ರಾಹುಲ್ ಗಾಂಧಿ ಅವರು ಗಮನಿಸಿ ಕೇಳಿದಾಗ, ʼನಿಮ್ಮ ಅಜ್ಜಿ ಇಂದಿರಮ್ಮ ಕೊಟ್ಟ ಭೂಮಿಯಲ್ಲಿ ಇದನ್ನು ಬೆಳೆದಿದ್ದೇವೆʼ ಎಂದು ಅದನ್ನು ರಾಹುಲ್ ಗಾಂಧಿ ಅವರಿಗೆ ನೀಡಿದರು. ಇದು ಉಳುವವನಿಗೆ ಭೂಮಿ ಕಾರ್ಯಕ್ರಮದ ಫಲ” ಎಂದರು.
ಇಂದಿರಾ ಗಾಂಧಿ ಅವರ ಯುಗದಲ್ಲಿ ಬದುಕಿರುವುದು ಪುಣ್ಯ
“ಇಂದಿರಾ ಗಾಂಧಿ ಅವರ ಯುಗದಲ್ಲಿ ನಾವು ಬದುಕಿದ್ದೇವೆ ಎಂಬುದೇ ನಮ್ಮ ಪುಣ್ಯ. ಈ ದೇಶದ ಉಕ್ಕಿನ ಮಹಿಳೆಯನ್ನು ಯಾರೂ ಸಹ ಮರೆಯಲು ಸಾಧ್ಯವಿಲ್ಲ. ಅವರ ಪ್ರತಿಯೊಂದು ಕಾರ್ಯಕ್ರಮ, ದಿಟ್ಟ ಹೆಜ್ಜೆ, ಹೋರಾಟ, ಧೈರ್ಯ, ನಾಯಕತ್ವ ಹಾಗೂ ತ್ಯಾಗ ಹಾಗೂ ಈ ದೇಶ ಭವಿಷ್ಯಕ್ಕೆ ನೆಹರು ಅವರ ಕುಟುಂಬ ನೀಡಿದ ಮಾರ್ಗದರ್ಶನವನ್ನು ದೇಶದ ಜನರು ಮರೆಯಲು ಸಾಧ್ಯವಿಲ್ಲ” ಎಂದರು.
ಇಂದಿರಾ ಗಾಂಧಿ ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಉಲ್ಲೇಖಿಸಿದ ಡಿಸಿಎಂ
“ಅಧಿಕಾರ ಎಂದರೆ ಪ್ರತಿಯೊಬ್ಬ ಮಾನವನ ಪ್ರಗತಿ. ನನ್ನ ತಂದೆ ನೆಹರು ಅವರು ರಾಜಕೀಯದ ಪವಾಡ ಪುರುಷ ಇರಬಹುದು ಆದರೆ ರಾಜಕೀಯದಲ್ಲಿ ನನ್ನ ದಾರಿಯೇ ಬೇರೆ. ಚುನಾವಣೆಯಲ್ಲಿ ಸೋಲುವುದು, ಗೆಲ್ಲುವುದು ಮುಖ್ಯವಲ್ಲ. ಈ ದೇಶವನ್ನು ಗಟ್ಟಿಗೊಳಿಸುವುದು ಮುಖ್ಯ. ಜನರು ತಮ್ಮ ಕರ್ತವ್ಯಗಳನ್ನು ಮರೆತುಬಿಡುತ್ತಾರೆ ಆದರೆ ತಮ್ಮ ಹಕ್ಕುಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರಜೆಗಳು ಅವರ ಕರ್ತವ್ಯ ಹಾಗೂ ಹಕ್ಕುಗಳನ್ನು ನಾವು ನೆನಪಿಸಬೇಕು. ಅಧಿಕಾರ ಎಂದರೆ ಪ್ರತಿ ಮಾನವನ ಪ್ರಗತಿ” ಎಂದು ಇಂದಿರಾ ಗಾಂಧಿ ಅವರ ಸ್ಪೂರ್ತಿದಾಯಕ ನುಡಿಮುತ್ತುಗಳನ್ನು ಭಾಷಣದ ಮಧ್ಯೆ ಡಿಸಿಎಂ ಉಲ್ಲೇಖಿಸಿದರು.
ಮತ್ತೆ ಅಧಿಕಾರಕ್ಕೆ ಬರಲು ತಂತ್ರ, ಒಗ್ಗಟ್ಟು, ಯೋಜನೆಗಳಿಗೆ
“ರಾಜ್ಯದ ಜನರಿಗೆ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ನೀಡುತ್ತದೆ. ಮತ್ತೆ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಮ್ಮ ಬಳಿ ತಂತ್ರ, ಮಂತ್ರ, ಒಗ್ಗಟ್ಟು, ನಾಯಕತ್ವ ಹಾಗೂ ಶಕ್ತಿಯಿದೆ. ಕಾರ್ಯಕರ್ತರು ಆಶಾಭಾವನೆ ಮತ್ತು ಒಗ್ಗಟ್ಟಿನಿಂದ ನಮ್ಮ ಜೊತೆ ಇದ್ದರೆ ಸಾಕು” ಎಂದು ಹೇಳಿದರು.
“ಸೋನಿಯಾ ಗಾಂಧಿ ಅವರು ಇಂದಿರಾ ಗಾಂಧಿ ಅವರ ನುಡಿಮುತ್ತುಗಳನ್ನು ಸಂಗ್ರಹಿಸಿರುವ ಪುಸ್ತಕದ ಹಕ್ಕುಸ್ವಾಮ್ಯ ರಾಹುಲ್ ಗಾಂಧಿ ಅವರ ಬಳಿ ಇರುವ ಕಾರಣಕ್ಕೆ ಬೇಗ ಲೋಕಾರ್ಪಣೆಗೊಳಿಸಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಗುವುದು. ಮಹಾತ್ಮ ಗಾಂಧಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ 100 ವರ್ಷಗಳ ನೆನಪಿನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು” ಎಂದು ಹೇಳಿದರು.
ಇಂದಿರಾ ಗಾಂಧಿ ಸಿನಿಮಾ ಥಿಯೇಟರ್ ಪ್ರಾರಂಭ ಮಾಡಿದೆ
“ನಾವು ದೆಹಲಿಗೆ ಯುವ ಕಾಂಗ್ರೆಸ್ ಸಮ್ಮೇಳನಕ್ಕೆ ತೆರಳುವ ವೇಳೆ ನಿಂತುಬಿಟ್ಟಿತು. ಇಂದಿರಾಗಾಂಧಿ ಅವರ ಹತ್ಯೆಯಾಗಿದೆ ಎನ್ನುವ ಸುದ್ದಿ ಬಂದ ಕಾರಣಕ್ಕೆ ರೈಲು ದೊಡ್ಡಬಳ್ಳಾಪುರದ ಹತ್ತಿರ ನಿಂತು ಬಿಟ್ಟಿತು. ಬೆಂಗಳೂರಿನಲ್ಲಿ ಗಲಭೆಯೆದ್ದ ಕಾರಣಕ್ಕೆ ಒಂದಷ್ಟು ಜನರನ್ನು ಜೈಲಿಗೆ ಹಾಕಲಾಯಿತು. ನಾನು ಇದೇ ವೇಳೆ ಜಿಲ್ಲಾಧಿಕಾರಿಗಳಾಗಿದ್ದ ಪುಟ್ಟಣಪ್ಪ ಅವರ ಬಳಿ ಸಿನಿಮಾ ಥಿಯೇಟರ್ ಪ್ರಾರಂಭ ಮಾಡುವುದಕ್ಕೆ ಅನುಮತಿ ಕೇಳಿದೆ. ಅವರು ಯಾವ ಹೆಸರನ್ನು ಇಟ್ಟಿದ್ದೀಯಾ ಎಂದು ಕೇಳಿದರು. ನಾನು ʼಇಂದಿರಾಗಾಂಧಿʼ ಅವರ ಹೆಸರನ್ನು ಇಡುತ್ತೇನೆ ಎಂದು ಹೇಳಿದ ತಕ್ಷಣ ಸಹಿ ಹಾಕಿದರು. ಕೆಪಿಸಿಸಿ ಹಿಂಭಾಗದ ನೂತನ ಕಟ್ಟಡಕ್ಕೆ ನಾಮಕರಣ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದೆ ಅವರು ʼಇಂದಿರಾ ಗಾಂಧಿ ಭವನʼ ಎಂದು ಸೂಚಿಸಿದರು. ನಂತರ ಸಭಾಂಗಣಕ್ಕೆ ʼಭಾರತ್ ಜೋಡೋ ಭವನʼ ಎಂದು ಹೆಸರಿಟ್ಟೆವು” ಎಂದರು.
ನಮ್ಮ ಸರ್ಕಾರದಿಂದ ಬಡವರಿಗೆ ತೊಂದರೆಯಾಗುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ