ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಸುಮಾರು 5 ಸಾವಿರಕ್ಕೂ ಹೆಚ್ಚು ಮಾಲೀಕರು ಇ-ಖಾತಾ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್‌ಲೈನ್ ಮೂಲಕ ಬಿಬಿಎಂಪಿ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಅಕ್ಟೋಬರ್ 1ರಿಂದ ಆರಂಭಿಸಲಾಗಿದೆ. ಆರಂಭದಲ್ಲಿ ಹಲವು ತಾಂತ್ರಿಕ ತೊಂದರೆಗಳಿದ್ದು, ಅವುಗಳನ್ನು ಬಿಬಿಎಂಪಿ ಸಿಬ್ಬಂದಿ ನಿವಾರಿಸಿದ್ದಾರೆ.
ಇ-ಖಾತಾ ಪಡೆಯಲು ಪ್ರಮುಖ ತೊಡಕಾಗಿದ್ದ ಋಣಭಾರ ಪ್ರಮಾಣಪತ್ರಕ್ಕಾಗಿ (ಇ.ಸಿ) ಮಾಲೀಕರು ಸಾಕಷ್ಟು ಹಣ ವ್ಯಯಮಾಡಬೇಕಾಗಿತ್ತು. ಆಸ್ತಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಇ-ಖಾತಾ ಪಡೆಯುವವರಿಗೆ ಮಾತ್ರ ಇ.ಸಿ ಅಗತ್ಯವಿದೆ. ಈಗಿರುವ ದಾಖಲೆಯಂತೆ ಇ-ಖಾತಾ ಪಡೆಯಲು ಇ.ಸಿ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ, ಉಳಿದ ಎಲ್ಲ ದಾಖಲೆಗಳು ಸರಿಯಾಗಿದ್ದರೆ, ಅಪ್‌ಲೋಡ್ ಮಾಡಿದ ಕೂಡಲೇ ಇ-ಖಾತಾ ಲಭ್ಯವಾಗುತ್ತಿದೆ.
ಇದೀಗ ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಖಾತಾ ಶುಲ್ಕವಾಗಿ 45 ರೂ. ಶುಲ್ಕ ಪಾವತಿಸಬೇಕು. ನಂತರ ಪ್ರತಿ ದಾಖಲೆಯ ಪ್ರತಿ ಪುಟ ಸ್ಕ್ಯಾನ್ ಮಾಡಲು ₹5 ನೀಡಬೇಕು. ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಅದರ ಶುಲ್ಕ 125 ರೂ.ಅನ್ನು ಬಿಬಿಎಂಪಿಗೆ ಪಾವತಿಸಬೇಕು ಎಂದು ವಿವರ ನೀಡಲಾಗಿದೆ.
ಆಧಾರ್ ಹೊಂದಿಲ್ಲದವರು ಇ-ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿ ಹೋಗಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ದಾಖಲೆಯಾಗಿ ನೀಡಬಹುದು. ನೋಂದಾಯಿತ ಪ್ರಮಾಣ ಪತ್ರದ ಸಂಖ್ಯೆ, ಆಸ್ತಿ ತೆರಿಗೆ ಎಸ್‌ಎಎಸ್ ಸಂಖ್ಯೆ, ಜಲಮಂಡಳಿ, ಬೆಸ್ಕಾಂ ಸಂಪರ್ಕದ 10 ಅಂಕಿಯ ಖಾತೆ ಸಂಖ್ಯೆಯನ್ನು ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಬಿಎಂಪಿ ಇ-ಖಾತಾ ಸ್ಥಿತಿ(13.11.2024 ರವರೆಗೆ):
• ವೆಬ್ ಸೈಟ್ ಗೆ ಭೇಟಿ ನೀಡಿರುವವರ ಸಂಖ್ಯೆ = 53 ಲಕ್ಷ
• ಕರಡು ಇ-ಖಾತಾ ಡೌನ್ಲೋಡ್ ಮಾಡಿರುವವರ ಸಂಖ್ಯೆ = 6 ಲಕ್ಷ
• ಅಂತಿಮ ಇ-ಖಾತಾಗಾಗಿ ಆನ್ ಲೈನ್ ನಲ್ಲಿ ನಮೂದಾಗಿರುವ ಸಂಖ್ಯೆ = 30000
• ಅಂತಿಮ ಇ-ಖಾತಾ ಡೌನ್ಲೋಡ್ ಮಾಡಿಕೊಂಡಿರುವ ಸಂಖ್ಯೆ = 5612