ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವೈಷ್ಟೋದೇವಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಹಾಯ ಧನ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ನಿನ್ನೆ ದಿನಾಂಕ 13-11-2024 ರಂದು ಮಾನ್ಯ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
* ವೈಷ್ಟೋದೇವಿಗೆ ಭೇಟಿ ನೀಡುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ತಲಾ ರೂ. 5000/-ಗಳ ಸಹಾಯ ಧನ* ನೀಡಲು ತೀರ್ಮಾನಿಸಲಾಯಿತು.
* ಸರ್ಕಾರದ ಬಹುಮಹಡಿಗಳ ಕಟ್ಟಡದ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ* ನಿರ್ಮಿಸಲು ತೀರ್ಮಾನಿಸಲಾಯಿತು.
* 120 ವರುಷಗಳ ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರ ಮಾಡಲು ಅಗತ್ಯವಿರುವ ಅನುದಾನ* ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.
* ಮಕ್ಕಳಿಗೆ ನೀಡುತ್ತಿರುವ ವಿದ್ಯಾ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈಗಾಗಲೇ ಮುಕ್ತಾಯವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಡಿಸೆಂಬರ್ 31 ರವರೆಗೂ ಕಾಲಾವಕಾಶ ನೀಡಿ*, ಇದರ ಸದುಪಯೋಗ ಪಡೆದುಕೊಳ್ಳಲು ಪ್ರಚಾರ ನೀಡುವಂತೆ ತೀರ್ಮಾನಿಸಲಾಯಿತು.
* ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ದಾಖಲೆ ಮಾಡಲು ಹಾಗೂ ಆಸ್ತಿಗಳನ್ನು ರಕ್ಷಿಸಲು* ತೀರ್ಮಾನಿಸಲಾಯಿತು.
* ಅವಧಿ ಮುಗಿಯುವ 14 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅವಧಿ ಮುಗಿದ ನಂತರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು, ಅರ್ಜಿ ಸ್ವೀಕಾರವಾಗಿರುವ 28 ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು, ಅರ್ಜಿ ಸ್ವೀಕಾರವಾಗದೇ ಇರುವ 13 ದೇವಾಲಯಗಳಿಗೆ ಪುನಃ ಅರ್ಜಿ ಕರೆಯಲು ಹಾಗೂ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಖಾಲಿ ಇರುವ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು.
ಸದರಿ ಸಭೆಯಲ್ಲಿ ಸದಸ್ಯರುಗಳಾದ ಕೆ. ಎಮ್. ನಾಗರಾಜ್, ದ್ವಾರಕಾನಾಥ್, ಕೆ. ಚಂದ್ರಶೇಖರ್, ಮಹಾಂತೇಶ ಪ್ರಭು ಶಾಸ್ತ್ರಿ, ಮಲ್ಲಿಕಾ ಪಕ್ಕಲ್, ಮಠಸಿದ್ದ ಪಂಡಿತಾರಾಧ್ಯ, ರಾಧಾಕೃಷ್ಣ, ಶ್ರೀವತ್ಸ ಕೇದಿಂಥ್ಯಾಲಯ, ಡಾ. ಎಂ. ವಿ. ವೆಂಕಟೇಶ್ ಆಯುಕ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.