ಬೆಂಗಳೂರು: ದೀಪಾವಳಿ ಹಬ್ಬದ ವೇಳೆಯಲ್ಲೇ ಸಾಲು ಸಾಲು ರಜೆಗಳಿದ್ದಾವೆ. ಈ ಕಾರಣಕ್ಕೆ ರಾಜ್ಯದ ಜನರು ತಮ್ಮ ಸ್ವ ಗ್ರಾಮಗಳಿಗೆ, ಇಲ್ಲವೇ ಪ್ರವಾಸಕ್ಕೆ ತೆರಳೋರ ಸಂಖ್ಯೆ ಹೆಚ್ಚಿದೆ. ಇಂತವರಿಗೆ ಕೆ ಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ. ಅದೇ ಮುಂಗಡ ಬಸ್ ಟಿಕೆಟ್ ಬುಕ್ಕಿಂಗ್ ನಲ್ಲಿ ಶೇ.5, 10ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ಇಂದು ಈ ಸಂಬಂಧ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿಸಿಯು, ದಿನಾಂಕ 31.10.2024 ರಂದು ನರಕ ಚತುರ್ದಶಿ ಹಾಗೂ ದಿನಾಂಕ:01.11.2024 ರಂದು ಕನ್ನಡ ರಾಜ್ಯೋತ್ಸವ ದಿನಾಂಕ 02.11.2024ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಕರಾರಸಾ ನಿಗಮ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 30.10.2024 ರಿಂದ 01.11.2024 ರವರೆಗೆ ಬೆಂಗಳೂರಿನಿಂದ ಹೆಚ್ಚುವರಿಯಾಗಿ 2000 ವಿಶೇಷ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಕೋರಿದೆ.
ಇನ್ನೂ ಪ್ರಯಾಣಿಕರು ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ & ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂಬುದಾಗಿ ಘೋಷಿಸಿದೆ.