ಆಂಧ್ರಪ್ರದೇಶದಲ್ಲಿ ತಡರಾತ್ರಿ ಘೋರ ದುರಂತವೊಂದು ಸಂಭವಿಸಿದ್ದು, ಬಸ್-ಆಟೋರಿಕ್ಷಾ ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕಲಕಡ ಗ್ರಾಮದಲ್ಲಿ ಖಾಸಗಿ ಬಸ್ ಮತ್ತು ಆಟೋರಿಕ್ಷಾ ನಡುವೆ ಮಾರಣಾಂತಿಕ ಡಿಕ್ಕಿ ಸಂಭವಿಸಿದೆ. ಇದರಿಂದ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ 9:30ರ ಸುಮಾರಿಗೆ ಅಪಘಾತ ಸಂಭವಿಸಿದೆ.
ರಾಯಚೋಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಕೃಷ್ಣ ಮೋಹನ್ ಮಾತನಾಡಿ, ಬಸ್ ಪಿಲಾರ್ ಕಡೆಯಿಂದ ರಾಯಚೋಟಿಗೆ ಬರುತ್ತಿದ್ದು, ಇನ್ನೊಂದು ಬಸ್ ಅನ್ನು ಓವರ್ ಟೇಕ್ ಮಾಡುವ ವೇಳೆ ಆಟೋರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಇನ್ನಿಬ್ಬರು ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಚಿತ್ತೂರಿನಿಂದ ಹೈದರಾಬಾದ್ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಅವರವರ ಸ್ಥಳಕ್ಕೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.