ಶಿವಮೊಗ್ಗ: ರಾಜ್ಯ, ಹೊರ ರಾಜ್ಯ, ದೇಶ-ವಿದೇಶಗಳಲ್ಲಿ ಡೊಳ್ಳು ಕುಳಿತದ ಮೂಲಕ ಕರುನಾಡಿನ ವಿಶಿಷ್ಠ ಕಲೆಯನ್ನು ಪ್ರದರ್ಶಿಸಿದಂತ ಕಲಾವಿದನಿಗೆ, ನಾಲ್ಕೈದು ಬಾರಿ ಅರ್ಜಿ ಸಲ್ಲಿಸಿದರು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡದೇ ಇರುವುದು ವಿಪರ್ಯಾಸವೇ ಸರಿ. ರಾಜ್ಯೋತ್ಸವ ಪ್ರಶಸ್ತಿಗೂ ರೆಕಮೆಂಡೇಷನ್, ರಾಜಕೀಯ ನಾಯಕರ ಪ್ರಭಾವ ಬಳಸಿ ಈ ಕಲಾವಿದ ಪಡೆಯ ಬೇಕೋ ಅಥವಾ ಕುರುನಾಡಿನ ಕೀರ್ತಿ ದೇಶ-ವಿದೇಶಗಳಲ್ಲಿ ಸಾರಿದಂತ ನಿಜ ಕಲಾವಿದನ ಕಲಾ ಸೇವೆ ಗುರ್ತಿಸಿ ಈ ಬಾರಿ 2024ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾರೆ ಸಚಿವ ಶಿವರಾಜ ತಂಡರಿಗೆ ಎಂಬ ನಿರೀಕ್ಷೆಯಲ್ಲಿ ಡೊಳ್ಳು ಕಲಾವಿದ ಜಿ.ಸಿ ಮಂಜಪ್ಪ ಇದ್ದಾರೆ. ಹಾಗಾದ್ರೇ ಅವರ ಸಾಧನೆಯ ಏನು.? ರಾಜ್ಯೋತ್ಸವ ಪ್ರಶಸ್ತಿ ನೀಡುವ ಮಟ್ಟದ ಕಲಾಸಿರಿವಂತಿಕೆ ಮೆರೆದು, ಜನಜನಿತರೇ ಎನ್ನುವ ಬಗ್ಗೆ ಅವರ ಸಾಧನೆ ಮುಂದಿದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದ ಜಿ.ಸಿ ಮಂಜಪ್ಪ ಅವರು ಅಂತರಾಷ್ಟ್ರೀಯ ಡೊಳ್ಳಿನ ತಂಡದ ಮುಖ್ಯ ಕಲಾವಿದ ಎಂಬುದಾಗಿಯೇ ಪ್ರಸಿದ್ಧಿ. 2019ನೇ ಸಾಲಿನ ಜಾನಪದ ಆಕಾಡೆಮಿ ವಾರ್ಷಿಕ ಪ್ರಶಸ್ತಿ, ಇವರ ಡೊಳ್ಳಿನ ಸಾಧನಗೆ ಸಂದ ಕೀರ್ತಿ. ಹಾಗಾದ್ರೆ ಇವರ ಜೀವನ, ಸಾಧನೆ, ಸಂದ ಇನ್ನಷ್ಟು ಪ್ರಶಸ್ತಿಗಳ ಬಗ್ಗೆ ಮುಂದಿದೆ ಓದಿ.
ಜಿ.ಸಿ ಮಂಜಪ್ಪ ಪರಿಚಯ
ಶಿವಮೊಗ್ಗ ಜಿಲ್ಲೆ ಸಾಗರ ತಾ ಕಣ್ಣೂರು ಗ್ರಾಮದಲ್ಲಿ 04.06.1957ರಲ್ಲಿ ಜಿ.ಸಿ ಮಂಜಪ್ಪ ಜನನವಾಗುತ್ತೆ. ತಂದೆ ಘಟ್ಟದ ಚನ್ನಪ್ಪ, ತಾಯಿ ಸೀತಮ್ಮ ಪುತ್ರರಾಗಿ ಜನಿಸಿದಂತ ಇವರು, ದ್ವಿತೀಯ ಪಿಯುಸಿ ಮುಗಿಸಿ, ವ್ಯವಸಾಯವನ್ನ ತಮ್ಮ ತಂದೆಯ ಜೊತೆಗೂಡಿ ಮೈಗೂಡಿಸಿಕೊಂಡವರು. ಇವರು, ಮೂಲತಃ ದಕ್ಷಿಣ ಕನ್ನಡದವರು.
ಚಿಕ್ಕಂದಿನಿಂದಲೂ ಡೊಳ್ಳು ಕುಣಿತ ಕಲೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದಂತ ಇವರು, ಈ ಕಲೆಗೆ ಆಕರ್ಷಿತನಾಗಿ 1971ರಲ್ಲಿ ಗುರುಗಳಾದ ವಡ್ಡರ ರಂಗಪ್ಪ ಇವರಲ್ಲಿ ತರಬೇತಿ ಪಡೆಯುತ್ತಾರೆ. ಆ ಬಳಿಕ 1974 ರಲ್ಲಿ ನಮ್ಮೂರಿನ 15 ಜನ ಯುವಕರನ್ನು ಕಟ್ಟಿ, ತಾವೇ ಸ್ವತಃ ಡೊಳ್ಳನ್ನು ತಯಾರಿಸಿ ಕೊಟ್ಟು ಹಾಗೂ ತರಬೇತಿ ನೀಡಿರುತ್ತಾರೆ
ಆಕಾಶವಾಣಿ ಭದ್ರಾವತಿ ಮತ್ತು ಚಂದನ ಟಿವಿ ಕೇಂದ್ರದಲ್ಲಿ ಡೊಳ್ಳಿನ ಪದದ ಮುಖ್ಯ ಕಲಾವಿದರಾಗಿ ಸೇವೆ
1982ರಲ್ಲಿ ಹಾಗೂ 1986 ಮತ್ತು 1996 ರಲ್ಲಿ ರಾಜ್ಯಮಟ್ಟದ ಯುವಜನಮೇಳದ ಡೊಳ್ಳಿನ ಸ್ಪರ್ಧೆಯಲ್ಲಿ ಭಾಗಿಯಾದಂತ ಈ ತಂಡಕ್ಕೆ 3 ಬಾರಿ ಪ್ರಥಮ ಸ್ಥಾನ ಪಡೆದಿದೆ. 1986ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ ಡೊಳ್ಳಿನ ಪದದ ಮುಖ್ಯ ಕಲಾವಿದರಾಗಿ ಇದುವರೆಗೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ರಷ್ಯಾದಲ್ಲಿ ನಡೆದ ಭಾರತೋತ್ಸವ ಕಾರ್ಯಕ್ರಮದಲ್ಲಿ ಭಾಗಿ, 3 ತಿಂಗಳಲ್ಲಿ 160ಕ್ಕೂ ಹೆಚ್ಚು ಕಾರ್ಯಕ್ರಮ
1987ರಲ್ಲಿ ರಷ್ಯಾದಲ್ಲಿ ನಡೆದ ಭಾರತೋತ್ಸವ ಕಾರ್ಯಕ್ರಮದಲ್ಲಿ 3 ತಿಂಗಳುಗಳ ಕಾಲ ಇನ್ನೂರ ಐವತ್ತಕ್ಕು ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ್ದಾರೆ. ಪ್ರಥಮ ವಿಶ್ವಕನ್ನಡ ಸಮ್ಮೇಳನ, ಕರ್ನಾಟಕೋತ್ಸವ ದೆಹಲಿ ಹಾಗೂ ಭುವನೇಶ್ವರದಲ್ಲಿ 1988 ರಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಐದು ಬಾರಿ ಅಖಿಲ ಭಾರತ ಜನಪದ ಸಮ್ಮೇಳನ, 2 ಬಾರಿ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಡೊಳ್ಳು ಕುಣಿತ ಪ್ರದರ್ಶನ
ದೆಹಲಿಯಲ್ಲಿ 6 ಬಾರಿ, ನಾಗಪುರದಲ್ಲಿ 2 ಬಾರಿ, ಮಧ್ಯಪ್ರದೇಶದಲ್ಲಿ 7 ಬಾರಿ, ಗುಜರಾತಿನಲ್ಲಿ 2 ಬಾರಿ, ಒರಿಸ್ಸಾದಲ್ಲಿ 1 ಬಾರಿ, ಕಲ್ಕತ್ತಾದಲ್ಲಿ 2 ಬಾರಿ, ಉದಯಪುರದಲ್ಲಿ 2 ಬಾರಿ, ಮುಂಬೈನಲ್ಲಿ 1 ಬಾರಿ, ಮದ್ರಾಸ್ನಲ್ಲಿ 1 ಬಾರಿ, ಮೈಸೂರು ದಸರಾ ಮೆರವಣಿಗೆಯಲ್ಲಿ 5 ಬಾರಿ, ಹಂಪಿ ಉತ್ಸವದಲ್ಲಿ 3 ಬಾರಿ ಡೊಳ್ಳು ಕುಣಿತದ ಕಾರ್ಯಕ್ರಮ ನೀಡಿದ್ದಾರೆ.
1997ರ ದಸರಾ ಮೆರವಣಿಗೆಯಲ್ಲಿ ಇವರ ಡೊಳ್ಳಿನ ತಂಡಕ್ಕೆ ಪ್ರಥಮ ಸ್ಥಾನ ಬಂದಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರಿಂದ ಈ ಮೇಲ್ಕಂಡ ಮುಖ್ಯ ಕಾರ್ಯಕ್ರಮಗಳಲ್ಲದೇ ಸುಮಾರು 120ಕ್ಕೂ ಹೆಚ್ಚಿನ ಕಾರ್ಯಕ್ರಮ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹಾಗೂ ಶಿಕಾರಿಪುರ ತಾಲೂಕಿನ 6 ಯುವಕ ಸಂಘದ 160ಕ್ಕೂ ಹೆಚ್ಚಿನ ಯುವಕರಿಗೆ ಡೊಳ್ಳಿನ ತರಬೇತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 1998 ರಿಂದ ಜಿಲ್ಲಾ ಯುವಜನ ಮೇಳ ಹಾಗೂ ತಾಲ್ಲೂಕು ಯುವಜನ ಮೇಳದಲ್ಲಿ ಡೊಳ್ಳಿನ ಸ್ಪರ್ಧೆಗೆ ತೀರ್ಪುಗಾರವಾಗಿ ಕಾರ್ಯನಿರ್ವಹಿಸಿದ್ದಾರೆ.
ಮೂರು ಬಾರಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಟ್ಟದ ಜನಪದ ಸಮ್ಮೇಳನದಲ್ಲಿ ಹಾಗೂ ಒಂದು ಬಾರಿ ತಾಲ್ಲೂಕು ಮಟ್ಟದ ಜನಪದ ಸಮ್ಮೇಳನದಲ್ಲಿ ಇವರ ಕಲಾ ಸೇವೆಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರ ಡೊಳ್ಳು ಕುಣಿತಕ್ಕೆ ಮನಸೋತಂತೆ ಶಿವಮೊಗ್ಗ ಜಿಲ್ಲೆ 6 ತಾಲೂಕಿನ ಸಂಬಂಧಪಟ್ಟ ಇಲಾಖೆಯವರು ಹಾಗೂ 40 ಕ್ಕೂ ಹೆಚ್ಚನ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಕಲಾರತ್ನ ಎಂಬ ಬಿರುದು ಹಾಗೂ ಜನಪದ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಲಾಗಿದೆ.
ದಿನಾಂಕ 20-03-2021ರಂದು ಆನಂದಪುರದಲ್ಲಿ ನಡೆದ ಸಾಗರ ತಾಲ್ಲೂಕು ಮಟ್ಟದ 2ನೇ ಜಾನಪದ ಸಮ್ಮೇಳನದ ಅಧ್ಯಕ್ಷನಾಗಿದ್ದರು. ದಿನಾಂಕ 08-05-2022 ರಂದು ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2019 ಸಾಲಿನ ವಾರ್ಷಿಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಬೆಂಗಳೂರು ಜಾನಪದ ಅಕಾಡೆಮಿ ಹಾಗೂ ಸಂಸ್ಕೃತಿ ಇಲಾಖೆಯವರು ನೀಡಿ, ಗೌರವಿಸಲಾಗಿದೆ.
ಈ ಡೊಳ್ಳಿನ ಕಲಾವಿದನ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ? ಈ ಬಾರಿಯಾದರೂ ರಾಜ್ಯ ಸರ್ಕಾರ ನೀಡುತ್ತಾ ರಾಜ್ಯೋತ್ಸವ ಪ್ರಶಸ್ತಿ?
ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಡೊಳ್ಳು ಕುಣಿತ ಪ್ರದರ್ಶನ ನೀಡಿರುವಂತ ಜಿ.ಸಿ ಮಂಜಪ್ಪ ಅವರ ಅದ್ಭುತತೆಗೆ ಮನಸೋಲದವರೇ ಇಲ್ಲ. ನೂರಾರು ಆಸಕ್ತರಿಗೆ ಡೊಳ್ಳು ಕುಣಿತ ಕಲಿಸಿಕೊಟ್ಟು, ತರಬೇತಿ ನೀಡಿರುವಂತ ಇವರು, ಸತತ ಐದು ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಮಾತ್ರ ಯಾಕೋ ಕೃಪೆ ತೋರಿದಂತಿಲ್ಲ.
ಈಗ ಮತ್ತೆ ಅರ್ಜಿ ಹಾಕಿದ್ದಾರೆ. ಇದು ನನ್ನ ಕೊನೆಯ ಪ್ರಯತ್ನ. ಮತ್ತೆ ಅರ್ಜಿ ಹಾಕುವುದಿಲ್ಲ ಎಂಬುದು ಜಿ.ಸಿ ಮಂಜಪ್ಪ ಮಾತು. ಈ ಅತ್ಯದ್ಭುತ ಡೊಳ್ಳಿನ ಕಲಾವಿದನಿಗೆ ಈ ಬಾರಿಯಾದರೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ.? ಈ ಸಾಧಕನಿಗೆ ನೀಡಿ, ರಾಜ್ಯೋತ್ಸವ ಪ್ರಶಸ್ತಿಗೊಂಡು ಮತ್ತಷ್ಟು ಬೆಲೆ ಹೆಚ್ಚುವಂತೆ ಮಾಡುತ್ತಾ?
ಅಂದಹಾಗೇ ಬಂಗಾರಪ್ಪ ಅವರ ಶಿಷ್ಯ, ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರನ್ನು ಭೇಟಿ ಮಾಡಿ, ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಸಾಗರ ತಾಲ್ಲೂಕು ಶಾಸಕರು ಜಿ.ಸಿ ಮಂಜಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು ಎಂಬುದಾಗಿ ಸಚಿವ ಶಿವರಾಜ ತಂಡರಗಿಯವರಿಗೆ ಶಿಫಾರಸ್ಸು ಕೂಡ ಮಾಡಿದ್ದಾರೆ.
ಇದರ ಜೊತೆಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಅವರಿಗೂ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ತಮ್ಮ ಸಾಧನೆ ಪರಿಗಣಿಸಿ ನೀಡಲು ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದಾರೆ. ಮಂಜಪ್ಪ ಅವರ ಕಲಾಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿರುವಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಡ ತಮ್ಮ ಜಿಲ್ಲೆಯಿಂದ ಜಿ.ಸಿ ಮಂಜಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ.
ಹೀಗಾಗಿ ಜನಾನುರಾಗಿ ಸಿಎಂ ಸಿದ್ಧರಾಮಯ್ಯ, ಸಚಿವ ಶಿವರಾಜ ತಂಡರಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರು ಈ ಎಲೆ ಮರೆಯ ಪ್ರತಿಭೆಯನ್ನು ಗುರುತಿಸುತ್ತಾರಾ.? 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಖ್ಯಾತ ಡೊಳ್ಳು ಕಲಾವಿದ ಜಿ.ಸಿ ಮಂಜಪ್ಪ ಅವರಿಗೆ ಸರ್ಕಾರ ಸಾಧನೆ ಪರಿಗಣಿಸಿ ನೀಡಲಿದ್ಯ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಗಂಡರ್ಬಾಲ್ ಕ್ಷೇತ್ರವನ್ನು ಉಳಿಸಿಕೊಂಡು ‘ಬಡ್ಗಾಮ್’ಗೆ ರಾಜೀನಾಮೆ ನೀಡಿದ ಒಮರ್ ಅಬ್ದುಲ್ಲಾ | Omar Abdullah
BREAKING : ಚನ್ನಪಟ್ಟಣಕ್ಕೆ ಡಿಕೆ ಸುರೇಶ್ ಸ್ಪರ್ಧೆ ಖಚಿತ : ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್