ಹುಬ್ಬಳ್ಳಿ : ಚುನಾವಣೆಗೆ ಟಿಕೇಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಸಹೋದರನ ವಿರುದ್ಧ ಆರೋಪ ಬಂದಿದೆ. ನಾನು ಗೋಪಾಲ್ ಬೇರೆಯಾಗಿ 35 ವರ್ಷವಾಗಿದೆ. ನನ್ನ ಮತ್ತು ಗೋಪಾಲ್ ಮಧ್ಯೆ ಯಾವುದೇ ವ್ಯವಹಾರ ಇಲ್ಲ.ಗೋಪಾಲ ಜೋಶಿ ನನ್ನ ಸಹೋದರನಾಗಿದ್ದರೂ, ಅವರಿಂದ ನಾನು ಬೇರೆಯಾಗಿ 35 ವರ್ಷವಾಗಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಉಳಿದಿಲ್ಲ. ತಪ್ಪು ಮಾಡಿದವರ ವಿರುದ್ಧ ಧಾರಾಳವಾಗಿ ಕಠಿಣ ಶಿಕ್ಷೆ ಕೈಗೊಳ್ಳಬಹುದು ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ.
ನಾವು ನಾಲ್ವರು ಸಹೋದರರು ಅದರಲ್ಲಿ ಓರ್ವ ತೀರಿಹೋಗಿದ್ದಾನೆ. ಇನ್ನೋರ್ವ ಗೋಪಾಲ್ ಜೋಶಿ. ಕಳೆದ ಬಾರಿ ಇವರ ಮೇಲೆ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಪದೇ ಪದೇ ನನ್ನ ಸಹೋದರನ ಜೊತೆ ನನ್ನ ಹೆಸರು ಥಳಕು ಹಾಕಲಾಗುತ್ತದೆ. ನನ್ನ ಜೊತೆ ನನ್ನ ಸಹೋದರನ ಹೆಸರು ಥಳಕು ಹಾಕದಂತೆ ಕೋರ್ಟ್‌ನಿಂದ ತಡೆ ತರಲಾಗಿದೆ.
ಗೋಪಾಲ್ ಜೋಶಿ ಮಾತ್ರವಲ್ಲ, ಯಾರೇ ಆಗಲಿ. ಅವರು ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಅಫಿಡವಿಟ್‌ನಲ್ಲಿ ಅದರ ವಿವರಗಳಿವೆ ಎಂದು ದಾಖಲೆ ಪ್ರದರ್ಶಿಸಿದರು.