ಬೆಂಗಳೂರು : ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಬಹಳ ಬೇಗ ದುಡ್ಡು ಮಾಡಬೇಕು, ಅತ್ಯಂತ ವೇಗವಾಗಿ ಶ್ರೀಮಂತರಾಗಬೇಕು ಎನ್ನುವ ಆಸೆ ಎಲ್ಲರಿಗೂ ಸಹಜವಾಗಿ ಇದ್ದೆ ಇರುತ್ತೆ. ಆದರೆ ಈ ಷೇರು ಮಾರುಕಟ್ಟೆಯಲ್ಲಿ ಅದೆಷ್ಟೋ ಅಮಾಯಕ ಜನರು ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ. ಇದೀಗ ಇಂಥದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ವ್ಯಕ್ತಿ ಒಬ್ಬರಿಗೆ ಹಣ ದುಪ್ಪಟ್ಟು ಆಗುತ್ತದೆ ಎಂದು ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ದುಪ್ಪಟ್ಟು ಹಣ ಹಿಂತಿರುಗಿಸುವುದಾಗಿ ಆಮಿಷವೊಡ್ಡಿ 1.5 ಕೋಟಿ ರೂ.ವಂಚಿಸಿದ್ದ ಪ್ರಕರಣದಲ್ಲಿ ನಾಲ್ವರು ಬ್ಯಾಂಕ್ ನೌಕರರು ಸೇರಿ ಒಟ್ಟು ಎಂಟು ಮಂದಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆಹಿಡಿದಿದ್ದಾರೆ.
ಯಲಹಂಕ ಮೂಲದ ವ್ಯಕ್ತಿಗೆ ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ಹಣ ದ್ವಿಗುಣ ಮಾಡುವುದಾಗಿ ಆಮಿಷವೊಡ್ಡಿ ವಂಚಕರು ಆರಂಭದಲ್ಲಿ 50 ಸಾವಿರ ಕಟ್ಟಿಸಿಕೊಂಡಿದ್ದರು. ಹಣ ದ್ವಿಗುಣವಾಗಿದೆ ಎಂದು ವಾಟ್ಸ್ಆ್ಯಪ್ ಮಾಡಿ ಕಳೆದ ಮಾರ್ಚ್ನಿಂದ ಜೂನ್ ವರೆಗೂ ಹಂತ – ಹಂತವಾಗಿ 1.50 ಕೋಟಿ ಪಾವತಿಸಿಕೊಂಡು ವಂಚಿಸಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು.
ದೂರು ಮೇರೆಗೆ ಹಣ ಬ್ಯಾಂಕ್ ಖಾತೆ ಹೊಂದಿದ್ದ ಚಿಕ್ಕಮಗಳೂರಿನ ಮೂಲದ ಕೆಂಚೇಗೌಡ, ರಘು ಲಕ್ಷ್ಮೀ, ಮಾಲಾ ಹಾಗೂ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್ ಎಕ್ಸಿಕ್ಯೂಟಿವ್ಗಳಾದ ಮನೋಹರ್, ರಾಕೇಶ್ ಹಾಗೂ ಕಾರ್ತಿಕ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 29 ಲಕ್ಷ ಹಣವನ್ನ ಫ್ರೀಜ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.