ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿರುವ ಕೆ.ಎಸ್ ಈಶ್ವರಪ್ಪ ಅವರು, RCB ಸಂಘಟನೆ ಕಟ್ಟಲು ತಯ್ಯಾರಿ ಮಾಡಿಕೊಂಡಿದ್ದಾರೆ.ಈ ಹಿಂದೆ ಬಿಎಸ್ವೈ ವಿರುದ್ಧ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಕಟ್ಟಿದ್ದರು. ಇದೀಗ ವಿಜಯೇಂದ್ರ ವಿರುದ್ಧ ಆರ್ಸಿಬಿ ಬ್ರಿಗೇಡ್ ಕಟ್ಟಲು ಎಲ್ಲಾ ತಯಾರಿ ನಡೆದಿದ್ದು, ಇದಕ್ಕೆ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ಆರ್ಸಿಬಿ (ರಾಯಣ್ಣ,ಚನ್ನಮ್ಮ ಬ್ರಿಗೇಡ್) ಟಿ-20 ಆಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ ನಾನು ಟೆಸ್ಟ್ ಮ್ಯಾಚ್ ಆಡುವುದಕ್ಕೆ ಬಂದವನು. ನಾನು ಸುದೀರ್ಘವಾಗಿ ಓಡುವಂತಹ ಕುದುರೆ. ವಿಜಯೇಂದ್ರ ತಾಕತ್ತಿನ ಬಗ್ಗೆ ಅರಿತುಕೊಂಡಿರುವುದು ಬಹಳ ಸಂತಸ. ನಾನು ಲಂಬಿ ರೇಸ್ ಕಾ ಗೋಡಾ ನೋಡೋಣ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ಬಿಟ್ಟೋದವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ ವಿಜಯೇಂದ್ರ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕೆಲಸ ಮಾಡಲು ಭಗವಂತ ಬುದ್ದಿ ನೀಡಿದ್ದಾನೆ. ಆ ಕಾರ್ಯ ಮಾಡುವೆ. ನಾನು ಯಾರ ಹೇಳಿಕೆ ಗಂಭೀರವಾಗಿ ಪರಿಗಣಿಸಲ್ಲ, ನೋವು ಮಾಡಿಕೊಳ್ಳಲ್ಲ. ಲೋಕಸಭಾ ಚುನಾವಣೆಯಲ್ಲಿ ಕೆಲವರನ್ನು ಪಕ್ಷದಿಂದ ಹೊರಹಾಕಿದ್ದೇವೆ. ಈಗಾಗಲೇ ಶುದ್ಧೀಕರಣ ಆಗಿದೆ ಎಂದರು.