ಹುಬ್ಬಳ್ಳಿ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪುತ್ರ ಕೆ.ಇ.ಕಾಂತೇಶ್ಗೆ ಹಾವೇರಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ಮಾಡಿದ್ದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಕೆಎಸ್ ಈಶ್ವರಪ್ಪ ಅವರು ನಾನು ಬಿಜೆಪಿಗೆ ಸೇರಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪ ಮಕ್ಕಳು ಹೊಂದಾಣಿಕೆಯಿಂದ ಬಿಜೆಪಿ ಮುಕ್ತಿಯಾಗಬೇಕು. ಬಿಜೆಪಿ ಶುದ್ದೀಕರಣವಾಗಲು ಚುನಾವಣೆ ನಿಂತಿದ್ದೆ. ನಾನು ಬಿಜೆಪಿ ಸೇರಲ್ಲ, ನನಗೆ ಸಮಾಧಾನ ಆದರೆ ಮಾತ್ರ ವಾಪಸ್ ಬಿಜೆಪಿ ಸೇರುತ್ತೇನೆ. ನನ್ನ ಮಗನಿಗೆ ಹಾವೇರಿಗೆ ಟಿಕೆಟ್ ಕೊಡಿಸುತ್ತೇನೆ ಅಂತ ಹೇಳೆ ಬಿಎಸ್ ಯಡಿಯೂರಪ್ಪ ಮೋಸ ಮಾಡಿದರು ಎಂದು ಆರೋಪ ಮಾಡಿದರು.
ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ, ಜನ ಬೆಂಬಲ ಸಿಕ್ಕಿತ್ತು. ಆದರೆ, ಬಿಎಸ್ ಯಡಿಯೂರಪ್ಪ ಅವರಿಗೆ ಸಹಿಸಿಕೊಳ್ಳಲು ಆಗದೆ ಅಮಿತ್ ಶಾ ಅವರಿಗೆ ದೂರು ಕೊಟ್ಟರು. ದೂರು ಕೊಡಲು ಕಾರಣವೇನು ಎಂದು ಬಿಎಸ್ ಯಡಿಯೂರಪ್ಪ ಅವರು ಕಾರಣ ಹೇಳಿಲ್ಲ. ಸಂಘಟನೆ ಬೇಡಾ ಅಂತ ಮಾತ್ರ ಹೇಳಿದರು. ನಾನು ಪ್ರಾರ್ಥನೆ ಮಾಡಿದರೂ ಬಿಎಸ್ ಯಡಿಯೂರಪ್ಪ ಕೇಳಲಿಲ್ಲ. ಅವತ್ತು ನಾನು ತಪ್ಪು ಮಾಡಿದೆ. ರಾಯಣ್ಣ ಬ್ರಿಗೇಡ್ ಇರಬೇಕಿತ್ತು ಎಂದು ಹೇಳಿದರು.