ಬೆಂಗಳೂರು: ರಾಜಕೀಯದಲ್ಲಿ ಮೇಲೆ ಬರಬೇಕಾದರೆ ಒಂದು ಶಕ್ತಿ ಇರಬೇಕು. ಅದು ಹಣ ಬಲ ಜನಬಲ ಅಥವಾ ಬಾಹುಬಲ- ಯಾವುದಾದರೂ ಇರಬೇಕು ಅನ್ನುವ ಕಾಲಘಟ್ಟವಿದು. ಅಂತಹ ಪರಿಸ್ಥಿತಿಯಲ್ಲಿ ಈ ಯಾವ ಬಲವೂ ಇಲ್ಲದೆ, ಕೇವಲ ಛಲ ಮತ್ತು ತಳ ಸಮುದಾಯದವರಿಗೆ ಶಕ್ತಿ ತುಂಬ ಬೇಕೆನ್ನುವ ತುಡಿತದಿಂದ ಮಾಡಿದ ಅವಿರತ ಶ್ರಮವೇ ಇಂದು ನನಗೆ ರಾಜಕೀಯದಲ್ಲಿ ಉನ್ನತ ಸ್ಥಾನ ಮಾನವನ್ನು ತಂದುಕೊಟ್ಟಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪದವೀಧರರ ಸಂಘ ಬೆಂಗಳೂರು ಇದರ ವತಿಯಿಂದ ವಸಂತ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಮಗೆ ನೀಡಲಾದ ಸನ್ಮಾನ ಹಾಗೂ ಅಭಿನಂದನೆಗೆ ಉತ್ತರಿಸಿ ಅವರು ಮಾತನಾಡಿದರು.
ರಾಜಕೀಯವಾಗಿ ಅನಾಥ ಶಿಶುವಾಗಿದ್ದ ತಮ್ಮನ್ನು ಬಹುಬೇಗನೆ ಗುರುತಿಸಿ, ಗೌರವಿಸಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನದಂತಹ ಜವಾಬ್ದಾರಿಯುತ ಹುದ್ದೆಯನ್ನು ನೀಡಿರುವುದು ಭಾರತೀಯ ಜನತಾ ಪಾರ್ಟಿ ಎಂದು ಅವರು ಹೇಳಿದರು.
ಕಾಂಗ್ರೆಸ್‌ನಲ್ಲಿ 40 ವರ್ಷಗಳ ಕಾಲ ರಾಜಕೀಯದಲ್ಲಿದ್ದು ತಳಸಮುದಾಯದ ಏಳಿಗೆಗಾಗಿ ಹೋರಾಟ ನಡೆಸಿದರೂ ಯಾವ ಗೌರವ ಮತ್ತು ಸ್ಥಾನಮಾನಗಳೂ ಸಿಗಲಿಲ್ಲ. ಕಾಂಗ್ರೆಸ್ ಪಕ್ಷ ಕೇವಲ ಒಂದು ಕುಟುಂಬದ ಏಳಿಗೆಗಾಗಿ ಇದೆಯೇ ಹೊರತು ದೇಶದ ಅಭಿವೃದ್ಧಿಗಾಗಲಿ, ಸಂವಿಧಾನದ ಆಡಳಿತಕ್ಕಾಗಲಿ ಇರುವಂಥ ಪಕ್ಷವಲ್ಲ. ಸಂವಿಧಾನಪರ, ದಲಿತಪರ, ಬಡತನ ನಿರ್ಮೂಲನೆಯ ಪರ ಎಂದೆಲ್ಲ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ವಾಸ್ತವದಲ್ಲಿ ಅದ್ಯಾವುದನ್ನೂ ಮಾಡದೆ ದೇಶದ್ರೋಹಿಗಳ ಪಕ್ಷವಾಗಿ ಬದಲಾಗಿದೆ.
ಜನರಿಗೆ ಸುಳ್ಳುಗಳನ್ನು ಹೇಳುತ್ತಲೇ, ಸಮುದಾಯಗಳನ್ನು ಒಡೆಯುತ್ತಲೇ ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್ ಪಕ್ಷದಿಂದ ಬೇಸತ್ತು, ಅದಕ್ಕೊಂದು ಪಾಠ ಕಲಿಸಬೇಕು ಎಂಬ ಛಲದಿಂದ ಅಲ್ಲಿಂದ ಹೊರಗೆ ಬಂದವನು ನಾನು. ಆಗ ನನಗೆ ಪರ್ಯಾಯ ಆಯ್ಕೆಯಾಗಿ ಕಂಡಿದ್ದು ಬಿಜೆಪಿ. ಪಕ್ಷಕ್ಕೆ ಬರುವ ಮೊದಲು ನಾನೂ ಕಾಂಗ್ರೆಸ್‌ನವರು ಹೇಳುತ್ತಿದ್ದ ಸುಳ್ಳುಗಳನ್ನು ನಂಬಿದ್ದೆ. ಬಿಜೆಪಿ ಬ್ರಾಹ್ಮಣರ ಪಕ್ಷ, ದಲಿತ ವಿರೋಧಿ, ಸಂವಿಧಾನ ವಿರೋಧಿ ಇತ್ಯಾದಿ ಇತ್ಯಾದಿ ಸುಳ್ಳುಗಳನ್ನು ನಂಬಿ ಶಂಕೆಯಿಂದಲೇ ಬಂದಿದ್ದೆ. ಆದರೆ ಒಮ್ಮೆ ಪಕ್ಷದ ಒಳಗೆ ಬಂದ ನಂತರ ಸತ್ಯಾಂಶ ಏನು ಎಂಬುದು ಗೊತ್ತಾಯಿತು ಎಂದು ನಾರಾಯಣಸ್ವಾಮಿ ಹೇಳಿದರು.
ನಿಜವಾಗಿಯೂ ಡಾ. ಬಿ.ಆರ್ ಅಂಬೇಡ್ಕರ್ ವಿರಚಿತ ಸಂವಿಧಾನದ ಬಗ್ಗೆ ಪೂರ್ಣ ಗೌರವ ಹೊಂದಿ ಅದನ್ನು ಚಾಚೂ ತಪ್ಪದೆ ಅನುಸರಿಸುತ್ತಿರುವ ಪಕ್ಷ ಭಾರತೀಯ ಜನತಾ ಪಕ್ಷ. ಎಲ್ಲರ ಏಳಿಗೆಗಾಗಿ, ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ಹೋರಾಡುತ್ತಿರುವುದು ಬಿಜೆಪಿ ಮಾತ್ರ. ಈ ಸತ್ಯವನ್ನು ತಳಮಟ್ಟದ ಸಮುದಾಯಗಳಿಗೆ ತಿಳಿಯದಂತೆ ಸುಳ್ಳಿನ ಕಂತೆಗಳನ್ನು ಕಾಂಗ್ರೆಸ್ ಪೋಣಿಸುತ್ತಲೇ ಬಂದಿದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಸುಳ್ಳುಗಳನ್ನು ಯಾರೂ ನಂಬುತ್ತಿಲ್ಲ. ದೇಶದ ಜನತೆ ಭಾರತೀಯ ಜನತಾ ಪಕ್ಷಕ್ಕೆ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಜನರ ಆಶಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಈಡೇರಿಸುತ್ತಿದ್ದಾರೆ ಎಂದು ಅವರು ನುಡಿದರು.
ತಮ್ಮ ಬಾಲ್ಯದ ಕಡು ಕಷ್ಟದ ಜೀವನವನ್ನು ನೆನಪಿಸಿಕೊಂಡ ಅವರು, ದೃಷ್ಟಾಂತವನ್ನು ಮುಂದಿಟ್ಟು ತಾವು ಛಲವಾದಿಯಾಗಿ ಬೆಳೆದ ಬಗೆಯನ್ನು ವಿವರಿಸಿದರು. ಚೆಲುವಾದಿ ಹೆಸರಿನ ಜಾತಿ ಸಮುದಾಯದಿಂದ ಬಂದ ತಾವು ಛಲವಾದಿಯಾಗಿ ಬೆಳೆದು ಸಮುದಾಯಕ್ಕೂ ಆ ಹೆಸರು ಬರುವಂತಾಗಿದ್ದು ಸಣ್ಣ ಸಂಗತಿಯಲ್ಲ ಎಂದು ಹೇಳಿದರು.
ಛಲವಾದಿ ಸಮುದಾಯದ ಸಂಘಟನೆ ಮಾಡಿದೆ, ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲಿಲ್ಲ. ನನ್ನದು ನೇರ, ನಿಷ್ಠುರ ನಡೆ-ನುಡಿ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಸಣ್ಣ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಹೊತ್ತು ಸಮರ್ಥವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಬಿಜೆಪಿಗೆ ಬಂದಾಗ ಕಾಂಗ್ರೆಸ್‌ನವರು ನನ್ನ ಭವಿಷ್ಯ ಮುಗಿಯಿತು ಎಂದು ಮಾತಾಡಿಕೊಂಡರು. ಆದರೆ ನಿಜವಾಗಿ ನನ್ನ ರಾಜಕೀಯ ಭವಿಷ್ಯ ಪ್ರಾರಂಭವಾಗಿದ್ದೇ ಬಿಜೆಪಿಯಲ್ಲಿ. ನಾನು ಯಾರಿಗೂ ಚೇಲಾಗಿರಿ ಮಾಡಿಲ್ಲ. ಪರಿಶ್ರಮವನ್ನು ನಂಬಿದ್ದೇನೆ ಅದನ್ನು ಗುರುತಿಸಿ ಪಕ್ಷ ಸ್ಥಾನಮಾನ ಕೊಟ್ಟಿದೆ. ಬಿಜೆಪಿ ನಾಯಕತ್ವ ನನಗೆ ಜವಾಬ್ದಾರಿ ನೀಡಿದೆ ಎಂದು ನಾರಾಯಣ ಸ್ವಾಮಿ ನೆನಪಿಸಿಕೊಂಡರು.
ಕಾಂಗ್ರೆಸ್‌ನವರು ಹೇಳುತ್ತಿದ್ದಂತೆ ಬಿಜೆಪಿಯಲ್ಲಿ ಗರ್ಭಗುಡಿ ಎಲ್ಲಿದೆ ಅಂತ ಹುಡುಕಿದೆ, ಕಾಣಲಿಲ್ಲ. ಬ್ರಾಹ್ಮಣರ, ಮೇಲ್ವರ್ಗದವರ ಪಕ್ಷ ಎಂಬ ಅಪ ಪ್ರಚಾರದ ಸತ್ಯಾಂಶ ಹುಡುಕಿದೆ. ಅದೂ ಕಾಣಲಿಲ್ಲ. ಬಿಜೆಪಿ ನಿಜವಾದ ಅರ್ಥದಲ್ಲಿ ಎಲ್ಲರನ್ನೂ ಒಳಗೊಂಡ, ಸರ್ವಸ್ಪರ್ಷಿ, ಸರ್ವವ್ಯಾಪಕ ಪಕ್ಷವಾಗಿದೆ ಎಂದು ಅವರು ನುಡಿದರು.
ದಲಿತರು, ತಳ ಸಮುದಾಯದವರು ನೂರಾರು ಸಂಘಟನೆಗಳನ್ನು ಮಾಡಿಕೊಂಡು ವಿಘಟಿತರಾದರೆ ಯಾವ ಶಕ್ತಿಯೂ ಬರುವುದಿಲ್ಲ. ಅದರ ಬದಲು ವಿಚಾರ ಮತ್ತು ಧ್ಯೇಯದ ಅಡಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ದಲಿತರ ಪಕ್ಷವಾಗಿಯೇ ಬೆಳೆಸಿದರೆ ಅಧಿಕಾರ ಪಡೆದು ಸಮಾಜದಲ್ಲಿ ನಿಜವಾದ ಅಭಿವೃದ್ಧಿಯನ್ನು ಮಾಡಬಹುದು ಎಂದು ಅವರು ನುಡಿದರು.
ಇದಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಸಿದ್ದರಾಮ ಶರಣರು ಬೆಲ್ದಾಳ ಮಠ, ಸೇವಾಲಾಲ್ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಐವರು ಸ್ವಾಮೀಜಿಗಳು, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಮೂಡಾ ಹಗರಣ ಬದಿಗೊತ್ತಲು ಸಿದ್ಧರಾಮಯ್ಯ ಜಾತಿಗಣತಿ ಮುನ್ನೆಲೆಗೆ ತಂದಿದ್ದಾರೆ: ಬಿ.ವೈ. ವಿಜಯೇಂದ್ರ
‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ
BIG NEWS: ಸರ್ಕಾರದ ಎಲ್ಲಾ ಇಲಾಖೆ ‘ನಾಮಫಲಕ’ಗಳನ್ನು ‘ಕನ್ನಡ’ದಲ್ಲೇ ಪ್ರದರ್ಶಿಸುವುದು ಕಡ್ಡಾಯ: ರಾಜ್ಯ ಸರ್ಕಾರ ಆದೇಶ