ನವದೆಹಲಿ: ತೀವ್ರ ವಾಗ್ವಾದದ ವೇಳೆ ಶಿರೋಮಣಿ ಅಕಾಲಿ ದಳದ ನಾಯಕರೊಬ್ಬರು ಹಾರಿಸಿದ ಗುಂಡು ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನಿಗೆ ತಗುಲಿದ ಪರಿಣಾಮ ಅವರು ಗಾಯಗೊಂಡಿದ್ದಾರೆ. ಪಂಜಾಬ್ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡ ಸ್ಥಳೀಯ ಎಎಪಿ ನಾಯಕ ಮನ್ದೀಪ್ ಸಿಂಗ್ ಬ್ರಾರ್ ಅವರನ್ನು ಪಂಜಾಬ್ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರ ಗಂಭೀರ ಸ್ಥಿತಿಯನ್ನು ನೋಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲುಧಿಯಾನದ ಜಿಲ್ಲಾ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಅವರು ಅಕಾಲಿ ನಾಯಕ ವರ್ದೇವ್ ಸಿಂಗ್ ಮಾನ್ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಅಧಿಕಾರಿ (ಬಿಡಿಪಿಒ) ಕಚೇರಿಯ ಹೊರಗೆ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ತಿಳಿದ ಫಾಜಿಲ್ಕಾ ಹಿರಿಯ ಪೊಲೀಸ್ ಅಧಿಕಾರಿ ವರಿಂದರ್ ಸಿಂಗ್ ಬ್ರಾರ್ ಜಲಾಲಾಬಾದ್ಗೆ ಧಾವಿಸಿದರು.
ಮಾಜಿ ಸಂಸದ ಜೋರಾ ಸಿಂಗ್ ಮಾನ್ ಅವರ ಪುತ್ರ ವರದೇವ್ ಸಿಂಗ್ ನೋನಿ ಮಾನ್ ಅವರು ಶಾಲೆಗೆ ಸಂಬಂಧಿಸಿದ ಕಡತವನ್ನು ತೆರವುಗೊಳಿಸುವ ಬಗ್ಗೆ ಕೇಳಲು ಬಿಡಿಪಿಒ ಕಚೇರಿಗೆ ಬಂದಿದ್ದರು ಎಂದು ಬ್ರಾರ್ ಹೇಳಿದರು. ಬಿಡಿಪಿಒ ಅವರ ಮನವಿಯನ್ನು ತಿರಸ್ಕರಿಸಿದರು, ನಂತರ ಅಕಾಲಿ ನಾಯಕರು ಅಸಮಾಧಾನಗೊಂಡು ಕಚೇರಿಯಿಂದ ಹೊರನಡೆದರು ಎನ್ನಲಾಗಿದೆ. ಹೊರಗೆ ಅವರು ಎಎಪಿ ನಾಯಕ ಮನ್ದೀಪ್ ಸಿಂಗ್ ಬ್ರಾರ್ ಅವರೊಂದಿಗೆ ಘರ್ಷಣೆ ನಡೆಸಿದರು, ಈ ಸಂದರ್ಭದಲ್ಲಿ ಅಕಾಲಿ ನಾಯಕ ವರ್ದೇವ್ ಸಿಂಗ್ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.