ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜೈಲು ಸೇರಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಿವಾಸದ ಮೇಲೆ ಇತ್ತೀಚಿಗೆ SIT ಅಧಿಕಾರಿಗಳು ದಾಳಿ ಮಾಡಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಹೌದು ವಿರೋಧಿಗಳನ್ನು ಹತ್ತಿಕ್ಕಲು ಎಚ್ಐವಿ ಸೋಂಕಿತ ಮಹಿಳೆಯರನ್ನು ಹನಿಟ್ರ್ಯಾಪ್ಗೆ ಶಾಸಕ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಇದೀಗ, ಶಾಸಕನ ಮನೆಯಲ್ಲಿ ಸಿಕ್ಕ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ನಲ್ಲಿ ಬಿಜೆಪಿ ಸೇರಿ ವಿವಿಧ ರಾಜಕೀಯ ನಾಯಕರ ಅಶ್ಲೀಲ ವಿಡಿಯೊ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ SIT ಅಧಿಕಾರಿಗಳು ಶಾಸಕ ಮುನಿರತ್ನ ಮನೆ ಮೇಲೆ ಸೆ.28ರಂದು ದಾಳಿ ನಡೆಸಿ, ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ ಸೇರಿ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಅವುಗಳನ್ನು ಪರಿಶೀಲನೆ ಮಾಡಿದ ವೇಳೆ ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಖಾಸಗಿ ವಿಡಿಯೊಗಳು ಸಿಕ್ಕಿವೆ ಎನ್ನಲಾಗಿದೆ. ಹನಿಟ್ರ್ಯಾಪ್ ಮಾಡಲು ಈ ವಿಡಿಯೊಗಳನ್ನು ಚಿತ್ರೀಕರಣ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇದಕ್ಕೂ ಮೊದಲು ಶಾಸಕ ಮುನಿರತ್ನ ಅವರು ಗುತ್ತಿಗೆದಾರ ಚೆಲುವರಾಜುಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದರು ಅದಾದ ಬಳಿಕ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.ಬಳಿಕ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದಾರೆ. ಇದೀಗ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವಲ್ಲಿರುವ ವಿಡಿಯೋಗಳು ಅಸಲಿಯೋ ಅಥವಾ ನಕಲಿಯೋ ಎಂಬುದರ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.