ಮಂಗಳೂರು : ಗುತ್ತಿಗೆದಾರರೊಬ್ಬರು ಕೆರೆ ಅಭಿವೃದ್ಧಿಗಾಗಿ ಕಾಮಗಾರಿ ನೆರವೇರಿಸಿದ್ದರು. ಈ ಒಂದು ಕಾಮಗಾರಿಯ ಬಿಲ್ ಪಾವತಿಗಾಗಿ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿರುವಾಗಲೇ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದಿರುವ ಘಟನೆ ಮಂಗಳೂರಿನಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ನಡೆದಿದೆ.
ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರೊಬ್ಬರು, ಕೆರೆ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆ ಕೆಲಸ ನಿರ್ವಹಿಸಿದ್ದರು. ಕಾಮಗಾರಿಯ 9,77,154 ರೂ ಮೊತ್ತದ ಬಿಲ್ ಮಂಜೂರಾತಿಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಜೂನಿಯರ್ ಇಂಜಿನಿಯರ್ ನಾಗರಾಜು ಅವರ ಬಳಿ ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರು ತೆರಳಿದ್ದರು.
ಈ ವೇಳೆ ಬಿಲ್ ಪಾಸ್ ಮಾಡಲು ತನಗೆ 37 ಸಾವಿರ ರೂ. ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗೆ 15 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಜೂನಿಯರ್ ಇಂಜಿನಿಯರ್ ನಾಗರಾಜು ಮುಂಚಿತವಾಗಿ 7000 ರೂ. ಲಂಚ ಪಡೆದಿದ್ದರು.ಉಳಿದ ಲಂಚದ ಮೊತ್ತವಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ನ ಜೂನಿಯರ್ ಇಂಜಿನಿಯರ್ ನಾಗರಾಜು 30 ಸಾವಿರ ರೂ. ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ 15 ಸಾವಿರ ರೂ. ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಠಾಣಾ ಉಪಾಧೀಕ್ಷಕಿ ಡಾ.ಗಾನ ಪಿ.ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಮಾಹಿತಿ ನೀಡಿದ್ದಾರೆ.