ಬೆಂಗಳೂರು : ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ನಿನ್ನೆ ಜಾಮೀನು ಪಡೆದು ಹೊರಬಂದಿದ್ದ ಆರ್ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಇದೀಗ ಅತ್ಯಾಚಾರ ಪ್ರಕರಣದಲ್ಲಿ ರಾಮನಗರದ ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು 2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆ ಪೋಲೀಸರು ಬಿಜೆಪಿ ಶಾಸಕ ಮುನಿರತ್ನ ಅವರನ್ನು ಮತ್ತೆ ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ನೆಲಮಂಗಲ ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಸೆಕ್ಷನ್ 164 ಅಡಿ ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಅತ್ಯಾಚಾರ ನಡೆದ ಸ್ಥಳವಾದ ಜೆಪಿ ಪಾರ್ಕ್ ಬಳಿಯ ಶೆಡ್‌ನಲ್ಲಿ ನಿನ್ನೆ ಮಹಿಳೆಯ ಸಮ್ಮುಖದಲ್ಲಿ ಮಹಜರು ಕಾರ್ಯ ಮಾಡಲಾಗಿದೆ. ಹಾಗಾಗಿ ಇಂದು ಮುನಿರತ್ನ ಜೈಲಿನಿಂದ ಬಿಡುಗಡೆಯಾದ ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.