ಕೊಪ್ಪಳ : ಕ್ರೀಡಾಕೂಟದಲ್ಲಿ ಭಾಗವಹಿಸಿ ಮರಳಿ ಹೋಗುತ್ತಿದ್ದ ವೇಳೆ ಟಾಟಾ ಏಸ್ ವಾಹನ ಒಂದು ಪಲ್ಟಿ ಆಗಿದ್ದ ಪರಿಣಾಮ ಅದರಲ್ಲಿದ್ದ ಸುಮಾರು 30 ಮಕ್ಕಳಿಗೂ ಹೆಚ್ಚು ಗಾಯಗಳಾಗಿರುವ ಘಟನೆ ಕೊಪ್ಪಳ ತಾಲೂಕಿನ ಹಾಲವರ್ತಿ ಕ್ರಾಸ್ ಬಳಿ ನಡೆದಿದೆ.
ಇಂದು ಕ್ರೀಡಾಕೂಟಕ್ಕೆಂದು ಬಂದಿದ್ದ ಹಾಲವರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು, ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಮುಗಿಸಿಕೊಂಡು ಮರಳಿ ಹೋಗುತ್ತಿದ್ದ ವೇಳೆ ಟಾಟಾ ಏಸ್ ವಾಹನಕ್ಕೆ ಆರ್ಟಿಓ ಅಧಿಕಾರಿ ನಿಲ್ಲಿಸಲು ಸೂಚನೆ ನೀಡಿದ್ದಾನೆ. ಹೀಗಾಗಿ ದಿಢೀರನೆ ನಿಲ್ಲಿಸಲು ಹೋಗಿದ್ದರಿಂದ ಟಾಟಾ ಏಸ್ ಪಲ್ಟಿಯಾಗಿದೆ ಎನ್ನಲಾಗುತ್ತಿದೆ.
ಇನ್ನು ದುರ್ಘಟನೆ ನಡೆಯುತ್ತಿದ್ದಂತೆ ಆರ್ಟಿಓ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡ ಸ್ಥಳೀಯರು, ಅಧಿಕಾರಿಯನ್ನು ಹಿಡಿದು ತಳ್ಳಾಡಿದ್ದಾರೆ. ಆರ್ಟಿಓ ಅಧಿಕಾರಿಯಿಂದಲೇ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಸಧ್ಯ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.