ಹಾಸನ : ನನಗೆ ಸೇರಿದ ಕೋಟ್ಯಾಂತರ ರೂಪಾಯಿ ಆಸ್ತಿ ನ್ಯಾಯಾಲಯದಲ್ಲಿ ಇದೆ ಎಂದು ನಂಬಿಸಿ, ಸುಮಾರು 3 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದ್ದು, ಈ ಕುರಿತಂತೆ ಸಕಲೇಶಪುರದ ಯಸಳೂರುಪೊಲೀಸ್ ಠಾಣೆಯಲ್ಲಿ ಸುಮಾರು 22 ಜನರು, ಇಬ್ಬರು ಮಹಿಳೆ ಸೇರಿ ಎಂಟು ಜನರ ವಿರುದ್ಧ FIR ದಾಖಲಿಸಿದ್ದಾರೆ.
ಹೌದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ, ವಳಲಹಳ್ಳಿ, ನಿಡ್ತಾ ಹಾಗೂ ಕರಗೂರು ಸೇರಿ ಹಲವು ಹಳ್ಳಿ ಜನರ ಬಳಿ ಹೋಗಿ ನನಗೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿ ಹಾಗೂ ಮೂರುವರೆ ಕೋಟಿಯಷ್ಟು ನಗದು ಕೋರ್ಟ್ ಕೇಸ್ನಲ್ಲಿ ಸಿಲುಕಿರುವ ಬಗ್ಗೆ ಆರೋಪಿ ಮಹಿಳೆ ಅನುಷಾ ಹೇಳಿದ್ದಾರೆ.
ಜೊತೆಗೆ ತಾನು ಆಗರ್ಭ ಶ್ರೀಮಂತೆ, ನನ್ನ ಬಳಿಯ ಅಪಾರ ಮೌಲ್ಯದ ಆಸ್ತಿ ಕೋರ್ಟ್ ವ್ಯಾಜ್ಯಕ್ಕೆ ಸಿಲುಕಿದೆ. ಕೋರ್ಟ್ ವ್ಯಾಜ್ಯ ಬಗೆಹರಿಯಲಿ ಎಂದು ಸಕಲೇಶಪುರ ತಾಲ್ಲೂಕಿನ ದೊಡ್ಡನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಪ್ರತೀ ತಿಂಗಳು ಬಂದು, ಹಂದಿವೊಂದನ್ನು ಬಲಿಕೊಟ್ಟು ಪೂಜೆ ಸಲ್ಲಿಸುತ್ತಿದ್ದರು.
ಅನುಷಾ ಪೂಜೆಗೆ ಬಂದಾಗ ಅಲ್ಲಿಗೆ ಪೂಜೆಗೆ ಬಂದವರ ಜೊತೆ ವಿಶ್ವಾಸಗಳಿಸಿ, 2018 ರಿಂದ ನಿರಂತರವಾಗಿ ಅವರಿಗೆ ಸುಳ್ಳು ಹೇಳಿ ಹಣ ಪಡೆದು ‘ತಾನು ಕಷ್ಟದಲ್ಲಿದ್ದು, ಈಗ ಸಹಾಯ ಮಾಡಿದ್ರೆ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಹಿನ್ನಲೆ ಹಾಸನ ನಗರ ಮೂಲದ ಅನುಷಾ ಅಲಿಯಾಸ್ ಕೃಪಾ, ಭುವನೇಶ್ವರಿ ಅಲಿಯಾಸ್ ಅಶ್ವಿನಿ ಮತ್ತು ದೇವರಾಜ್, ಗಫಾರ್, ಶಶಿ, ಅಭಿಷೇಕ್, ಹರೀಶ್ ಸಾಗರ್ ವಿರುದ್ದ 3 ಕೋಟಿ 80 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದ್ದು, ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.