ಬೆಂಗಳೂರು: ರಾಜ್ಯದ 01 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಇನ್ಮುಂದೆ ವಾರಕ್ಕೊಂದು ಗ್ರಂಥಾಲಯ ಕಾರ್ಯಕ್ರಮ ಜಾರಿ ಮಾಡುವ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಶಾಲಾ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ವೃದ್ಧಿಸುವ ಸಲುವಾಗಿ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಗ್ರಂಥಾಲಯವನ್ನು ಸ್ಥಾಪಿಸಿ ಅಭಿವೃದ್ಧಿ ಪಡಿಸಲು ಮತ್ತು ಅದನ್ನು ಮಕ್ಕಳ ಬಳಕೆಗೆ ಅರ್ಹವಾಗಿಸಿ ನಿರಂತರ ಬಳಕೆಗೆ ನೀಡಲು ಉಲ್ಲೇಖದನುಸಾರ ಶಾಲೆಗಳಲ್ಲಿ ಓದುವ ಹವ್ಯಾಸ ಜ್ಞಾನದ ವಿಕಾಸ” ಎಂಬ ಕಾರ್ಯಕ್ರಮವನ್ನು ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳಲ್ಲಿ ವಾರಕ್ಕೆ ಒಂದು ಗ್ರಂಥಾಲಯ ಅವಧಿ ನಿಗಧಿಪಡಿಸಲು ಕ್ರಮವಹಿಸಲಾಗಿದೆ.
ಉದ್ದೇಶ: ಶಾಲಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯು ಶಿಕ್ಷಣದ ಧೈಯವಾಗಿದ್ದು, ವಿದ್ಯಾರ್ಥಿಗಳ ಜ್ಞಾನ, ಬುದ್ದಿ ಮತ್ತು ಮೌಲ್ಯದ ಕ್ರಿಯಾಶೀಲ ವಿಕಸನಕ್ಕಾಗಿ ಪಠ್ಯಪುಸ್ತಕಗಳ ಓದಿನ ಜೊತೆಗೆ ಇತರೆ ಪೂರಕ ಪುಸ್ತಕಗಳನ್ನು ಓದುವುದು ಅವಶ್ಯಕವಾಗಿರುತ್ತದೆ. ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಾಲಾ ಗ್ರಂಥಾಲಯಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಗ್ರಂಥಾಲಯಗಳು ಜ್ಞಾನಭಂಡಾರ ಅಷ್ಟೇ ಅಲ್ಲ ಬದಲಿಗೆ ವಿದ್ಯಾರ್ಥಿಗಳ ಸಂಪೂರ್ಣ ಮನೋವಿಕಾಸಕ್ಕೆ ಪೂರಕವಾಗಿರುತ್ತವೆ.
ಶಾಲಾ ಗ್ರಂಥಾಲಯದ ಪ್ರಾಥಮಿಕ ಉದ್ದೇಶವು ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದು. ಮಕ್ಕಳು ಆನಂದಿಂದ ಪುಸ್ತಕಗಳನ್ನು ಓದಿದಾಗ ಮಾತ್ರ ಈ ಹವ್ಯಾಸವು ಬೆಳೆಯಲು ಸಾಧ್ಯ, ಮಕ್ಕಳು ಆನಂದಿಸಿ ಓದಲು ಗ್ರಂಥಾಲಯದಲ್ಲಿ ಅನೇಕ ಪ್ರಕಾರದ, ಆಕರ್ಶಕ ಪುಸ್ತಕಗಳಿರಬೇಕು. ಈ ಪುಸ್ತಕಗಳು ಮಕ್ಕಳ ಅಭಿರುಚಿಗೆ ತಕ್ಕಂತಿರಬೇಕು.
ಓದುವ ಹವ್ಯಾಸವು ಮಕ್ಕಳಲ್ಲಿ ಶಬ್ದಭಂಡಾರ ವೃದ್ಧಿಸಿ, ನಿರರ್ಗಳತೆ, ಗ್ರಹಿಕಾ ಸಾಮರ್ಥ್ಯ, ಏಕಾಗ್ರತೆಯ ಶಕ್ತಿ, ಭಾಷಾ ಕೌಶಲ್ಯ ಮತ್ತು ಸೃಜನಾತ್ಮಕ ಬರವಣಿಗೆಗೆ ಪೂರಕವಾಗಿವೆ. ಅದಲ್ಲದೆ ಬೌದ್ಧಿಕ ಕೌಶಲ್ಯಗಳಾದ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಾರಾಂಶ ಮಾಡುವ ಕ್ಷಮತೆ, ಕಲ್ಪನಾ ಶಕ್ತಿ, ಸೃಜನಶೀಲತೆ, ಹಾಗೂ ಸಹಾನುಭೂತಿಯನ್ನು ಬೆಳೆಸುತ್ತದೆ. ಮೇಲ್ಕಂಡ ಉದ್ದೇಶದ ಗುರಿಯನ್ನು ಸಾಧಿಸಲು ಇಲಾಖೆಯಿಂದ “ಓದುವ ಹವ್ಯಾಸ ಜ್ಞಾನದ ವಿಕಾಸ ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಸದರಿ ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಮಾರ್ಗದರ್ಶಿಯನ್ನು ಪಾಲಿಸಬೇಕೆಂದು ಶಾಲೆಗಳಿಗೆ ತಿಳಿಸಲಾಗಿದೆ.
ಗ್ರಂಥಾಲಯ ಪುಸ್ತಕಗಳು, ಓದುವ ಸಾಮಗ್ರಿಗಳ ಸಂಗ್ರಹಣೆ ಮತ್ತು ಸ್ಥಾಪನೆ:
·
ಕಾಲ್ಪನಿಕ, ವಾಸ್ತವಿಕ, ಅವಾಸ್ತವಿಕ, ಪರಿಕಲ್ಪನೆ, ಜಾನಪದ, ಕವನ, ಕವಿತೆ, ನಾಟಕ, ಕಾಮಿಕ್ ಈ ಎಲ್ಲಾ ಪುಕಾರಗಳ ಪುಸ್ತಕಗಳು ಗ್ರಂಥಾಲಯಗಳಲ್ಲಿ ಓದುವ ಮೂಲೆಗಳಲ್ಲಿ ಲಭ್ಯವಿರಬೇಕು. ಕೇವಲ ಪಠ್ಯಪುಸ್ತಕಗಳನ್ನು ಓದುವುದರಿಂದ ಶಿಕ್ಷಕರ ಗಮನ ಮತ್ತು ಮಕ್ಕಳ ಜ್ಞಾನವು ತರಗತಿಯಲ್ಲಿ ಅಂಕಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಮಕ್ಕಳ ಕ್ರಿಯಾಶೀಲತೆ, ವಿಮರ್ಶಾತ್ಮಕ ಬೆಳವಣಿಗೆಗೆ ಎಲ್ಲಾ ಗುಣಮಟ್ಟದ ಸಾಹಿತ್ಯವನ್ನು ಓದುವುದು ಅಗತ್ಯವಾಗಿದೆ.
ಎಸ್.ಎಸ್.ಎಲ್.ಸಿ ಓದುವ ಮಕ್ಕಳಿಗೆ ಎಸ್.ಎಸ್.ಎಲ್.ಸಿ ನಂತರ ಮುಂದೇನು? ಎಂಬ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ವ್ಯಾಸಂಗಕ್ಕೆ ಮಾರ್ಗದರ್ಶನವಾಗಿ ಸ್ವತಂತ್ರವಾಗಿ ತೀರ್ಮಾನಿಸಲು ಸಹಾಯವಾಗುವಂತೆ ಪೂರಕ ದಾಖಲೆಗಳನ್ನು ಸಂಗ್ರಹಿಸಿಡುವುದು.
ಗ್ರಂಥಾಲಯ ಅನುದಾನವನ್ನು ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ಪ್ರತಿ ವರ್ಷ ರಾಜ್ಯದ ಎಲ್ಲಾ ಶಾಲೆಗಳಿಗೆ ನೀಡಲಾಗುತ್ತಿದೆ. ಅಲ್ಲದೆ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿರುವ ರೀಡಿಂಗ್ ರೂಮ್(RR) ನಿಧಿಯಿಂದ ಕೂಡಾ ಅನುದಾನ ಶಾಲೆಗಳಲ್ಲಿ ಲಭ್ಯವಿದೆ. ಈ ಅನುದಾನವನ್ನು ಬಳಸಿ ಗ್ರಂಥಾಲಯಗಳಿಗೆ ಕಡ್ಡಾಯವಾಗಿ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗಾಗಿ ಗುಣಮಟ್ಟದ ಓದುವ ಸಾಮಗ್ರಿಗಳನ್ನು ಖರೀದಿಸಬೇಕಾಗಿರುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರವು ಪ್ರಾಥಮಿಕ,ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಗುಣಮಟ್ಟದ ಪುಸ್ತಕಗಳ ಪಟ್ಟಿಯನ್ನು ಶಿಫಾರಸ್ಸು ಮಾಡಿದೆ. ಪುಸ್ತಕದ ಪಟ್ಟಿಯು ಡಿ.ಎಸ್.ಇ.ಆರ್.ಟಿ. ವೆಬ್ಬೆಟ್ನಲ್ಲಿ ಲಭ್ಯವಿದೆ. (https://dsert.karnataka.gov.in/storage/pdf-files/library/SSKLevel-1List-1.pdf)) ಮೇಲ್ಕಂಡ ಎಲ್ಲಾ ಪ್ರಕಾರಗಳ ಪುಸ್ತಕಗಳನ್ನು ಈ ಪಟ್ಟಿಯಿಂದ ಶಾಲೆಗಳು ಆಯ್ಕೆ ಮಾಡಿ ಖರೀದಿಸಬಹುದು., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಥವಾ ರೂಮ್ ಟು ರೀಡ್, ಪಥಮ್, ಎಪಿಎಫ್, ಕಲಿಕೆ ಟಾಟಾ ಟ್ರಸ್ಟ್ ಮುಂತಾದ ಇತರೆ ಎನ್ ಜಿ ಓ ಗಳ ಬೆಂಬಲದೊಂದಿಗೆ ಒದಗಿಸಿರುವ ಓದುವ ಸಾಮಗ್ರಿಗಳನ್ನು ಈ ಅವಧಿಯಲ್ಲಿ ಬಳಸಬೇಕು. ಗ್ರಂಥಾಲಯಗಳಲ್ಲಿ ಖರೀದಿ ಮಾಡಿದ ಪುಸ್ತಕಗಳನ್ನು ದಾಸ್ತಾನು ವಹಿಯಲ್ಲಿ (Accession Register) ರಲ್ಲಿ ನಮೂದಿಸಿರುವುದು.