ಬೆಂಗಳೂರು: ರಾಜ್ಯದ ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ, ಕಳ್ಳಬೇಟೆ ತಡೆ ಶಿಬಿರ, ವನ್ಯ ಪ್ರಾಣಿಗಳನ್ನು ಹಿಮ್ಮೆಟ್ಟಿಸುವ ತಂಡ, ಕ್ಷಿಪ್ರ ಸ್ಪಂದನ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸರ್ಕಾರದಿಂದ ಕಷ್ಟ ಪರಿಹಾರ ಭತ್ಯೆ ಅಂದರೆ ವಿಶೇಷ ಭತ್ಯೆಯನ್ನು ಮಂಜೂರು ಮಾಡಲಾಗಿದೆ. ಈ ಮೂಲಕ ರಾಜ್ಯದ ವನ್ಯ ಜೀವಿ ಪಡೆಗಳ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿರೋ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವವ ಈಶ್ವರ್ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದಾರೆ. ವನ್ಯಜೀವಿ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿಗಳಿಗೆ ಕಠಿಣ ಕೆಲಸದ ಭತ್ಯೆ (ಹಾರ್ಡ್ ಶಿಪ್ ಅಲೋಯನ್ಸ್)ಯನ್ನು ಮಂಜೂರು ಮಾಡಿದ್ದು, ಈ ಸಿಬ್ಬಂದಿಯ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3500, ಅರಣ್ಯ ರಕ್ಷಕರಿಗೆ 2700 ಹಾಗೂ ಡಿ ದರ್ಜೆ ನೌಕರರಿಗೆ 2000 ರೂ.ಗಳನ್ನು ಮಾಸಿಕ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ರಾಜ್ಯದ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಇದರ ನಿಗ್ರಹಕ್ಕಾಗಿ ಆನೆ ಕಾರ್ಯಪಡೆ ರಚಿಸಲಾಗಿದ್ದು, ಇದರಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಯೂ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಸಿಕ ಕರ್ತವ್ಯ ನಿರ್ವಹಿಸಿದ 6 ದಿನಗಳಿಗೆ 500 ರೂ. ಆಧಾರದಲ್ಲಿ ತಿಂಗಳಿಗೆ ಗರಿಷ್ಠ 2000 ರೂ. (ಷರತ್ತಿಗೆ ಒಳಪಟ್ಟು) ನೀಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ. ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿರತೆ ಕಾರ್ಯಪಡೆ, ವನ್ಯ ಜೀವಿಗಳನ್ನು ಹಿಮ್ಮೆಟ್ಟಿಸುವ ಕ್ಷಿಪ್ರ ಸ್ಪಂದನಾ ಪಡೆ ಸಿಬ್ಬಂದಿ ಮತ್ತು ಅರಣ್ಯದೊಳಗಿರುವ ಕಳ್ಳಬೇಟೆ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ತಾವು ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರು ಚಳಿ, ಮಳೆ, ಗಾಳಿ ಎನ್ನದೆ, ವನ್ಯಜೀವಿಗಳ ದಾಳಿಯ ಅಪಾಯದ ನಡುವೆಯೂ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನಿಸಿ, ಈ ವಿಶೇಷ ಭತ್ಯೆ ನೀಡಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ಎನ್ಕೌಂಟರ್: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿ ನಾಲ್ವರಿಗೆ ಗಾಯ
ಉತ್ತರ ಕ್ಯಾಲಿಫೋರ್ನಿಯಾದಲ್ಲಿ 1,78,000 ಎಕರೆ ಪ್ರದೇಶಕ್ಕೆ ಬೆಂಕಿ:134 ಕಟ್ಟಡಗಳು ನಾಶ