ಬೆಂಗಳೂರು : ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಳಿಕ ಇದೀಗ ವಾಹನಗಳ ಎಮಿಷನ್ ಟೆಸ್ಟಿಂಗ್ ದರದಲ್ಲಿ ಕೂಡ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು ದ್ವಿಚಕ್ರ ವಾಹನ, ಆಟೋ, ಕಾರು, ಲಾರಿ, ಬಸ್ಸು ಯಾವುದೇ ವಾಹನದ ಚಾಲಕರಾಗಿರಲಿ, ಮಾಲೀಕರಾಗಿರಲಿ ಎಮಿಷನ್ ಟೆಸ್ಟ್ ಮಾಡಿಸಿರುವುದು ಅನಿವಾರ್ಯ. ಇದೀಗ ಯಾವುದೇ ಸಮಯದಲ್ಲಿ ಎಮಿಷನ್ ಟೆಸ್ಟ್ ದರ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಸುಳಿವು ದೊರೆತಿದೆ. 2021 ರಲ್ಲಿ ಎಮಿಷನ್ ಟೆಸ್ಟಿಂಗ್ ದರವನ್ನ ಹೆಚ್ಚು ಮಾಡಲಾಗಿತ್ತು. ಈಗ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಈ ಒಂದು ವಿಷಯ ಕುರಿತಂತೆ ಸಾರಿಗೆ ಇಲಾಖೆಗೆ ಕರ್ನಾಟಕ ಎಮಿಷನ್ ಟೆಸ್ಟಿಂಗ್ ಸೆಂಟರ್ ಓನರ್ ಅಸೋಸಿಯೇಷನ್ ಒತ್ತಾಯ ಮಾಡಿದೆ. ಸರ್ಕಾರ ಹಿಂದಿನ ದರಕ್ಕಿಂತ ನಾಲ್ಕರಷ್ಟು ಹೆಚ್ಚು ಪಡೆಯಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ಕೆಲಸಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಸರ್ಕಾರ ದರ ಏರಿಕೆ ಮಾಡಬೇಕೆಂದು ಎಮಿಷನ್ ಟೆಸ್ಟಿಂಗ್ ಸೆಂಟರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಯೋಗೀಶ್ ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ವೇಳೆ ಸದ್ಯ ಒಂದು ಬೈಕ್ ಎಮಿಷನ್ ಟೆಸ್ಟ್ ಮಾಡಲು 65 ರುಪಾಯಿ ತೆಗೆದುಕೊಳ್ಳುತ್ತಾರೆ. ಇದನ್ನು 110 ರುಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ತ್ರಿಚಕ್ರ ವಾಹನಗಳಿಗೆ (ಆಟೋ, ಗೂಡ್ಸ್ ಆಟೋ) ಸದ್ಯ 75 ರೂಪಾಯಿ ಇದ್ದು, 100 ರುಪಾಯಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಅದೆ ರೀತಿಯಾಗಿ ನಾಲ್ಕು ಚಕ್ರದ ವಾಹನಗಳ ಟೆಸ್ಟ್ ನಲ್ಲೂ ಕೂಡ ದರ ಏರಿಸಿದರೆ ನಾಲ್ಕು ಚಕ್ರದ ಪೆಟ್ರೋಲ್ ಕಾರುಗಳ ಎಮಿಷನ್ ಟೆಸ್ಟ್ಗೆ ಪ್ರಸ್ತುತ 115 ರೂಪಾಯಿ ಇದ್ದು, 200 ರೂಪಾಯಿ ಮಾಡುವಂತೆ ಕೋರಲಾಗಿದೆ. ಎಲ್ಲಾ ಮಾದರಿಯ ಡಿಸೇಲ್ ವಾಹನಗಳಾದ ಲಾರಿ, ಬಸ್ ಹಾಗೂ ಟ್ರಕ್ ಗಳಿಗೆ ಸದ್ಯ 160 ರೂಪಾಯಿ 250ಕ್ಕೆ ಏರಿಕೆ ಮಾಡಬೇಕು ಎಂದು ವಿನಂತಿಸಲಾಗಿದೆ.
ಈಗಾಗಲೇ ದಿನಬಳಕೆ ವಸ್ತುಗಳು ಸೇರಿದಂತೆ ಪೆಟ್ರೋಲ್ ಡೀಸೆಲ್, ಹಾಲಿನ ಅದರ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಇದೀಗ ವಾಹನಗಳ ಎಮಿಷನ್ ಟೆಸ್ಟಿಂಗ್ ನಲ್ಲೂ ಕೂಡ ದರ ಹೆಚ್ಚಿಸಿದರೆ ಜನರಿಗೆ ಗಾಯದ ಮೇಲೆ ಬರೇ ಎಳೆದಂತೆ ಆಗುತ್ತದೆ. ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರ್ಕಾರ ಹೆಣಗಾಡುತ್ತಿದ್ದು ಇತರೆ ವಸ್ತುಗಳ ದರ ಏರಿಕೆಗೆ ಮುಂದಾಗಿದೆ.