ಬೆಂಗಳೂರು : ವಿದ್ಯಾರ್ಥಿ ದೆಸೆ ಅತ್ಯಂತ ಅಮೂಲ್ಯ. ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಜೀವಕ್ಕೆ ಹಾನಿಯಾಗುವಂತಹ ಕೃತ್ಯಗಳಿಗೆ ಮುಂದಾಗಬಾರದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್,ವಿದ್ಯಾರ್ಥಿನಿಯೊಬ್ಬರಿಗೆ ಬೆದರಿಕೆ ಹಾಕುವ ಮೂಲಕ ಆತ್ಮಹತ್ಯೆಗೆ ಕಾರಣವಾದ ಶಿಕ್ಷಕರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ವಿದ್ಯಾರ್ಥಿನಿಯ ಸಾವಿನ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಖಾಸಗಿ ಪ್ರೌಢ ಶಾಲೆ ಶಿಕ್ಷಕರಾದ ರೂಪೇಶ್ ಮತ್ತು ಸದಾನಂದ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿದ್ಯಾರ್ಥಿ ದೆಸೆ ಅತ್ಯಂತ ಅಮೂಲ್ಯ. ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಜೀವಕ್ಕೆ ಹಾನಿಯಾಗುವಂತಹ ಕೃತ್ಯಗಳಿಗೆ ಮುಂದಾಗಬಾರದು ಎಂದು ಅಭಿಪ್ರಾಯಪಟ್ಟಿದೆ.
ಸಹಪಾಠಿ ಒಬ್ಬರಿಗೆ ಚುಂಬಿಸುವ ವಿಡಿಯೋವನ್ನು ಪ್ರಚಾರ ಮಾಡುವುದಾಗಿ ಹೆದರಿಕೆ ಹಾಕಿದ್ದರಿಂದ ವಿದ್ಯಾರ್ಥಿನಿಯ ಸಾವಿಗೆ ಕಾರಣರಾಗಿದ್ದ ಆರೋಪದಲ್ಲಿ ದಾಖಲಾದ ಎಫ್ಐಆರ್ ರದ್ದು ಕೋರಿ ಇಬ್ಬರು ಶಿಕ್ಷಕರು ಅರ್ಜಿ ಸಲ್ಲಿಸಿದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು ಘಟನೆ ಕುರಿತು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.
ಹದಿಹರೆಯದ ಮಕ್ಕಳಿಗೆ ಶಿಕ್ಷಕರು ಬೋಧನೆ ಮಾಡುವ ಸಂದರ್ಭದಲ್ಲಿ ಅವರ ಮಾನಸಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಳ್ಳಬೇಕು. ಬದಲಿಗೆ ಮಕ್ಕಳನ್ನು ನಿರ್ಜಿವಿಗಳಂತೆ ನೋಡಬಾರದು ಎಂದು ತಿಳಿಸಿದೆ. ಶಿಕ್ಷಕರು ಮತ್ತು ಬೋಧಕರ ನಡುವೆ ಸೌರ್ಹಾದ ಸಂಬಂಧವಿರಬೇಕು. ಮಕ್ಕಳ ವಿಚಾರದಲ್ಲಿ ಶಿಕ್ಷಕರಲ್ಲಿನ ಸಂಕುಚಿತ ದೃಷ್ಟಿಕೋನ ಬದಲಾಗಬೇಕು. ವಿದ್ಯಾರ್ಥಿಗಳ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಶಿಕ್ಷಕರು ಶಿಸ್ತು ಕಲಿಸುವ ನೆಪದಲ್ಲಿ ಕ್ಷಮಿಸಲಾಗದ ಕೃತ್ಯಗಳನ್ನು ಮಾಡುವ ಮೂಲಕ ಮಕ್ಕಳ ಜೀವ ಆಕಸ್ಮಿಕವಾಗಿ ಕಳೆದುಕೊಳ್ಳುವಂತೆ ಮಾಡಬಾರದು ಎಂದು ಪೀಠ ತಿಳಿಸಿದೆ.