ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ನೇಮಕ ಅಕ್ರಮ ಸಂಬಂಧ ಮುರುಗೇಶ್ ನಿರಾಣಿ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಆದರೆ, ಅವರನ್ನು ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ.
ಹೌದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ದೂರು ಆಧರಿಸಿ ನೇಮಕ ಹಗರಣದ ತನಿಖೆಯನ್ನು ಹೈಗ್ರೌಂಡ್ಸ್ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ಅವರು, ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಪ್ರಕರಣ ರದ್ದು ಕೋರಿ ಮುರುಗೇಶ್ ನಿರಾಣಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಎಲ್ಲರನ್ನೂ ಬಂಧಿಸಿ ಕಾರಾಗೃಹದಲ್ಲಿಡುವುದು ಸರಿಯಲ್ಲ. ಹೊರಗಿರುವವರು ಮತ್ತು ಜೈಲಿನಲ್ಲಿರುವವರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ, ಈ ಪ್ರಕರಣದಲ್ಲಿತನಿಖೆ ಮುಂದುವರಿಸಿ, ಅದಕ್ಕೆ ನ್ಯಾಯಾಲಯ ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ, ಅರ್ಜಿದಾರರನ್ನು ಬಂಧಿಸಬೇಡಿ. ಅವರು ತನಿಖೆಗೆ ಎಲ್ಲಾರೀತಿಯ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿತು.
ಪ್ರಕರಣದ ಸಂಬಂಧ 52ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ, ಅರ್ಜಿದಾರರನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧದ ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು. ಆದರೆ, ತನಿಖೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, ತನಿಖಾಧಿಕಾರಿಗಳು ತನಿಖೆ ಮುಂದುವರಿಸಬಹುದು. ಆದರೆ, ಬಂಧಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನು ಮುಂದೂಡಿತು.