ಬೆಂಗಳೂರು: ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ಜನನ, ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಹಾಗೂ ಅಪರ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ದೇಶಾದ್ಯಂತ ಜನನ, ಮರಣ ನೋಂದಣಿ ಅಧಿನಿಯಮ, 1969 ಜಾರಿಯಲ್ಲಿರುತ್ತದೆ. ಕರ್ನಾಟಕ ಜನನ, ಮರಣಗಳ ನೋಂದಣಿ ನಿಯಮಗಳು, 1999ರ ಮೂಲಕ ಪುನರ್ ರಚಿತ ನಾಗರಿಕ ನೋಂದಣಿ ಪದ್ಮತಿಯನ್ನು ದಿನಾಂಕ: 01-01-2000 ರಿಂದ ರಾಜ್ಯಾದ್ಯಂತ ಏಕೀಕರಿಸಿ ಜನನ, ಮರಣ ನೋಂದಣಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇ.100 ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ, ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5) ರನ್ವಯ ಜನನ, ಮರಣ ಘಟನೆಗಳು ಘಟಿಸಿದ ಮೂವತ್ತು ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ಹಾಗೂ ಪುಕರಣ 7(1) ರನ್ವಯ ಜನನ, ಮರಣ ಘಟನೆಗಳು ಸಂಭವಿಸಿದ ಮೂವತ್ತು ದಿನಗಳ ನಂತರದ ವಿಳಂಬ ನೋಂದಣಿಯನ್ನು ನೋಂದಾಯಿಸಲು ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಉಲ್ಲೇಖಿತ (3) ರಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ಆದೇಶದನ್ವಯ ಜನನ, ಮರಣ ನೋಂದಣಿಗೆ ಸಂಬಂಧಿಸಿದಂತೆ, ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳ ಪಾತ್ರ ಜವಾಬ್ದಾರಿ ಹಾಗೂ ನಿರ್ವಹಿಸಬೇಕಾದ ಕಾರ್ಯಗಳ ಕುರಿತ ಮಾರ್ಗಸೂಚಿಯನ್ನು ಒಳಗೊಂಡ ಪ್ರಮಾಣಿತ ಕಾರ್ಯಚರಣೆಯ ವಿಧಾನಗಳನ್ನು ಉಲ್ಲೇಖ(4) ರಲ್ಲಿ ಹೊರಡಿಸಲಾಗಿರುತ್ತದೆ ಎಂದು ಹೇಳಿದ್ದಾರೆ.
ದಿನಾಂಕ. 01.07.2024 ರಿಂದ ಜಾರಿಗೆ ಬರುವಂತೆ ಉಲ್ಲೇಖ (3)ರ ಸರ್ಕಾರದ ಆದೇಶವನ್ನು ಗ್ರಾಮೀಣ ಪುದೇಶಕ್ಕೆ ಅನ್ವಯವಾಗುವಂತೆ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕೆಳಕಂಡ ಅಂಶಗಳನ್ನು ಪಾಲಿಸಲು ತಿಳಿಸಿದೆ.
1. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳೊಳಗೆ ಜನನ, ಮರಣ ಉಪ ನೋಂದಣಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನಿಯಮಾನುಸಾರ ನೋಂದಣಿ ಮಾಡತಕ್ಕದ್ದು.
a. ಘಟನೆ ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತವಾಗಿ ಒಂದು ಪುಮಾಣ ಪತ್ರವನ್ನು ವಿತರಿಸುವುದು.
b. ಕರ್ನಾಟಕ ಜನನ, ಮರಣ ನೋಂದಣಿ ನಿಯಮ 5ರಲ್ಲಿ ನಿಗದಿಪಡಿಸಿದ 21 ದಿನಗಳ ತರುವಾಯ ಮತ್ತು 30 ದಿನಗಳೊಳಗಾಗಿ ವರದಿಯಾಗುವ ಘಟನೆಗಳನ್ನು ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ 9(1) ರ ಪುಕಾರ ರೂ.2/- ತಡ ಶುಲ್ಕ ಪಡೆದು ನೋಂದಾಯಿಸುವುದು.
c. ಘಟನೆ ಸಂಭವಿಸಿದ 30 ದಿನಗಳ ತರುವಾಯ ವರದಿಯಾಗುವ ಘಟನೆಗಳ ನೋಂದಣಿಯನ್ನು ಮಾಡತಕ್ಕದ್ದಲ್ಲ. ಸದರಿ ಘಟನೆಗಳ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿರುವ ಹಿನ್ನೆಲೆಯಲ್ಲಿ ಕುರಿತಂತೆ ಸಾರ್ವಜನಿಕರಿಗೆ/
ಅರ್ಜಿದಾರರಿಗೆ ಮಾಹಿತಿಯನ್ನು ನೀಡುವುದು.
2. ಜನನ, ಮರಣ ಘಟನೆ ಸಂಭವಿಸಿದ 30 ದಿನಗಳ ನಂತರ ವರದಿಯಾಗುವ ಘಟನೆಗಳನ್ನು ಜನನ, ಮರಣ ನೋಂದಣಾಧಿಕಾರಿಗಳಾದ ಗ್ರಾಮ ಆಡಳಿತ ಅಧಿಕಾರಿಗಳು ನಿಯಮಾನುಸಾರ ಈ ಕೆಳಕಂಡಂತೆ ನೋಂದಣಿ ಮಾಡತಕ್ಕದ್ದು.
a. ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮ 9(2) ರ ಪ್ರಕಾರ 30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ,ಮರಣ ಹಾಗೂ ನಿರ್ಜೀವ ಜನನಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ ರೂ.5/- ತಡೆ ಶುಲ್ಕ ಪಡೆದು ನೋಂದಾಯಿಸುವುದು
b. ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳು 1999ರ ನಿಯಮ 9(3) ರ ಪ್ರಕಾರ ಒಂದು ವರ್ಷದ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ (Presidency Magistrate) ರವರ ಆದೇಶದೊಂದಿಗೆ ರೂ.10/- ತಡೆ ಶುಲ್ಕ ಪಡೆದು ನೋಂದಾಯಿಸುವುದು.
ಜನನ, ಮರಣ ನೋಂದಣಿ ಸಂಬಂಧ ಯಾವುದಾದರೂ ಸಂದೇಹ/ಸೃಷ್ಟಿಕರಣ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು.
ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಮಾಡುವ ಸಂದರ್ಭದಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿ ಅಥವಾ ಇ-ಜನ್ಮ ಸಹಾಯವಾಣಿ ಹಾಗೂ ಇ-ಮೇಲ್ crbdkar@gmail.com / ejanmahelpdesk@gmail.com ಮತ್ತು ದೂರವಾಣಿ 1800-425-6578 ಕ್ಕೆ ಸಂಪರ್ಕಿಸುವುದು.
ಜನನ, ಮರಣ ನೋಂದಣಿ ಸಂಬಂಧ ಭಾರತದ ಮಹಾ ನೋಂದಣಾಧಿಕಾರಿಗಳು / ರಾಜ್ಯದ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ / ಆದೇಶ / ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BIG NEWS : ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ʻಫುಡ್ ಪಾರ್ಕ್ʼ ಸ್ಥಾಪಿಸುವಂತೆ ʻನಿಸ್ಸಿನ್ ಸಂಸ್ಥೆʼಗೆ ಆಹ್ವಾನ