ಕಲಬುರ್ಗಿ : ಇಂದು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇದೀಗ ಕಲ್ಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ಪೊಲೀಸ್ ಠಾಣೆಗೆ ಧಾರಾಕಾರ ಮಳೆಯಿಂದ ನೀರು ಠಾಣೆಗೆ ನುಗ್ಗಿದೆ ಈ ವೇಳೆ ನೀರನ್ನು ಹೊರಹಾಕಲು ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.
ಹೌದು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಇಂದು ಒಂದು ಗಂಟೆಗಳ ಕಾಲ ವರುಣ ಅಬ್ಬರಿಸಿ, ಠಾಣೆಯಲ್ಲೇ ಪೊಲೀಸರಿಗೆ ಮಳೆ ನೀರು ದಿಗ್ಬಂಧನ ಹಾಕಿದೆ. ವರುಣಾರ್ಭಟಕ್ಕೆ ಠಾಣೆ ಆವರಣ ಮಾತ್ರವಲ್ಲದೇ ಠಾಣೆ ಒಳಗೂ ನೀರು ನುಗ್ಗಿದೆ. ಪೊಲೀಸ್ ಸಿಬ್ಬಂದಿ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.
ಪಟ್ಟಣದಲ್ಲಿ ಪೊಲೀಸ್ ಠಾಣೆಯು ತಗ್ಗು ಪ್ರದೇಶದಲ್ಲಿ ಇರುವುದರಿಂದ ಪ್ರತಿ ಬಾರಿ ಜೋರಾಗಿ ಮಳೆ ಬಂದರೆ ಸಾಕು ಠಾಣೆಯ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಪ್ರತಿ ವರ್ಷ ಕೂಡ ಇದೇ ಘಟನೆ ಮುಂದುವರೆದಿದ್ದು ಸಿಬ್ಬಂದಿಗಳು ಮಳೆ ನೀರನ್ನು ಹೊರ ಹಾಕಿ ಬೇಸತ್ತಿದ್ದಾರೆ. ಮಳೆನೀರು ಠಾಣಿಗೆ ನುಗ್ಗಿರುವುದರಿಂದ ಹಲೋ ಸಮಸ್ಯೆಗಳನ್ನು ಉಂಟು ಮಾಡಿದೆ.