ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಅತ್ಯಂತ ಜಿದ್ದಾಜಿದ್ದಿನ ಕ್ಷೇತ್ರ ಎಂದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿತ್ತು.ಇದೀಗ ಈ ಒಂದು ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರ ಬಿದ್ದಿದ್ದು, ವೈದ್ಯರಾಗಿರುವ ಡಾ. ಸಿಎನ್ ಮಂಜುನಾಥ್ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ ಅವರು ಹ್ಯಾಟ್ರಿಕ್ ಗೆಲುವಿನ ಬಳಿಕ ಇದೀಗ 4ನೇ ಬಾರಿ ಸೋತಿದ್ದಾರೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ. ನಾಲ್ಕನೇ ಬಾರಿ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಮಾದ್ಯಮದ ಮುಖಾಂತರ ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ ಗೆಲುವು ಖಚಿತವಾಗುತ್ತಿದ್ದಂತೆಯೇ ಸುರೇಶ್ ಪ್ರತಿಕ್ರಿಯೆ ನೀಡಿ, ಹೊಸಬರು ಚೆನ್ನಾಗಿ ಕೆಲಸ ಮಾಡಲಿ. ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರ ಜೊತೆ ನಾನು ಜೊತೆಯಾಗಿರುತ್ತೇನೆ.ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಬೇಕು. ನಾನು ಸೋಲನ್ನು ಸ್ವೀಕರಿಸಿದ್ದೇನೆ. ಗೆಲ್ಲುವ ವಿಶ್ವಾಶ ಇತ್ತು. ಆದರೆ, ಜನ ಬೇರೆ ತಿರ್ಮಾನ ಕೊಟ್ಟಿದ್ದಾರೆ.
ಮತದಾರ ಪ್ರಭುಗಳು ಕೊಟ್ಟಿರುವ ತಿರ್ಮಾನವನ್ನು ಸ್ವಾಗತಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿಯವರಿಗೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತೇನೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿತ್ತು. ಮಾಧ್ಯಮಗಳ ಸಮೀಕ್ಷೆಗಳೂ ಹಾಗೆ ಹೇಳಿದ್ದವು. ಆದರೆ, ಅವುಗಳೆಲ್ಲ ಸುಳ್ಳಾಗಿವೆ ಎಂದು ಅವರು ಹೇಳಿದರು.