ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ್ ಯುವತಿಯ ಭೀಕರ ಕೊಲೆಯಾಗಿತ್ತು. ಇದೀಗ ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ನಡೆಸಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾನೆ.ಅಲ್ಲದೆ ಯುವತಿಯ ಜೊತೆ ಮದುವೆ ಮಾಡದಿದ್ದರೆ ನೇಹಾ, ಅಂಜಲಿ ರೀತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಹೌದು ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಕುಟುಂಬ ಕಂಗಾಲಾಗಿದೆ. ಯುವತಿ ಅದೇ ಗ್ರಾಮದ ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ. ಬಿಕಾಂ ಓದುತ್ತಿರುವ ಈಕೆ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ತಿಪ್ಪಣ್ಣ ರೇಗಿಸುತ್ತಿದ್ದನು.
ತಿಪ್ಪಣ್ಣ ಹುಚ್ಚಾಟಕ್ಕೆ ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಳಂತೆ. ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜತೆಗೆ ಯುವತಿ ವಾಸವಿದ್ದಳು. ಯುವತಿಯನ್ನು ಮದುವೆ ಮಾಡಿಕೊಡುವಂತೆ ಧಮ್ಕಿಯನ್ನು ಹಾಕಿದ್ದನಂತೆ. ಕೆಲಸ ಇಲ್ಲದೆ ಊರಲ್ಲಿ ಸೋಮಾರಿಯಾಗಿರುವ ತಿಪ್ಪಣ್ಣ ಡೋಕರೆ, ಒಂದೇ ಸಮುದಾಯಕ್ಕೆ ಸೇರಿದರೂ ಮದುವೆ ಮಾಡಲು ನಿರಾಕರಣೆ ಮಾಡಲಾಗಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಪಾಗಲ್ ಪ್ರೇಮಿ ಕಾಟದಿಂದ ಯುವತಿ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಾಳೆ. ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಡೋಕರೆ ಪೀಡಿಸುತ್ತಿದ್ದಾನೆ. ಮದುವೆ ಮಾಡಿಕೊಡದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೆದರಿಕೆ ಹಾಕಿದ್ದಾನೆ.
ಸದ್ಯ ಕುಟುಂಬ ಮತ್ತೆ ರಕ್ಷಣೆ ಕೋರಿ ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದೆ. ಇದೀಗ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ರಕ್ಷಣೆಗಾಗಿ ಯುವತಿ ಮನೆಗೆ ಓರ್ವ ಪೊಲೀಸ್ ಪೇದೆಯನ್ನು ನೇಮಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.