ಬೆಂಗಳೂರು : ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಎಲ್ಲಿಯೂ ಮೋದಿ ಅಲೆ ಕಾಣಲೇ ಇಲ್ಲ. ಗ್ಯಾರಂಟಿ ಅಲೆ ಎಲ್ಲೆಡೆ ಪಸರಿಸಿದ್ದು, ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂಬ ವಿಶ್ವಾಸವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಈ ಅವಧಿಯಲ್ಲಿ ಪಾರದರ್ಶಕ ಮತ್ತು ಜನಪರವಾದ ಆಡಳಿತವನ್ನು ನೀಡಿದ್ದು, ಜನರ ವಿಶ್ವಾಸ ಇಮ್ಮಡಿಯಾಗಿದೆ. ಇದು ಚುನಾವಣೆಯ ಫಲಿತಾಂಶದಲ್ಲೂ ಪ್ರತಿಫಲಿಸಲಿದೆ ಎಂದರು.
ಪ್ರತಿಪಕ್ಷಗಳಿಂದ ದಿಕ್ಕುತಪ್ಪಿಸುವ ಪ್ರಯತ್ನ:
ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಅತ್ಯಂತ ಹೇಯವಾದುದಾಗಿದ್ದು, ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ಪ್ರಕರಣದ ತನಿಖೆಯನ್ನು ಎಸ್.ಐ.ಟಿ. ಗೆ ವಹಿಸಲಾಗಿದ್ದು, ಪ್ರಾಮಾಣಿಕವಾಗಿ ಅಧಿಕಾರಿಗಳು ತಮ್ಮ ಕಾರ್ಯ ಮಾಡುತ್ತಿದ್ದಾರೆ. ಈ ಹಂತದಲ್ಲಿ ಅನುಮಾನ ವ್ಯಕ್ತಪಡಿಸುವುದು, ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದರು.
ಪ್ರತಿಪಕ್ಷ ನಾಯಕರುಗಳು ತನಿಖೆಯ ದಿಕ್ಕು ತಪ್ಪಿಸಲು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಜನರಲ್ಲಿ ಗೊಂದಲ ಉಂಟು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಹಲವು ಮಹಿಳೆಯರು ಈಗಾಗಲೇ ಅತ್ಯಾಚಾರದ ದೂರು ದಾಖಲಿಸಿದ್ದು, ಪ್ರಮುಖ ಆರೋಪಿಗೆ ಶಿಕ್ಷೆ ಆಗಬೇಕೋ ಬೇಡವೋ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದವರಿಗೆ ಬದ್ಧತೆ ಇದ್ದರೆ ಪ್ರಜ್ವಲ್ ರೇವಣ್ಣನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಬೇಕು, ತೋರಿಕೆಗೆ 48 ಗಂಟೆಯಲ್ಲಿ ಬಂದು ಬಿಡಿ ಎಂದು ಹೇಳಿದರೆ ಆಗದು. ಪ್ರಕರಣದ ಪ್ರಮುಖ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂದರು.
ಕೇಂದ್ರ ಪ್ರಜ್ವಲ್ ಬಂಧನಕ್ಕೆ ಸಹಕರಿಸಬೇಕು:
ಪ್ರಜ್ವಲ್ ರೇವಣ್ಣಗೆ ನೀಡಲಾಗಿರುವ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ರಾಜ್ಯದಿಂದ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು, ಇಂಟರ್ ಪೋಲ್ ನೆರವಿನಿಂದ ಆರೋಪಿಯ ಬಂಧನಕ್ಕೆ ಸಹಕಾರ ನೀಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.
ಪೆನ್ ಡ್ರೈವ್ ಪ್ರಕರಣದ ಯಾವುದೇ ಆರೋಪಿಗೆ ಸರ್ಕಾರ ಬೆಂಬಲ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರತಿಪಕ್ಷಗಳು ಅನಗತ್ಯವಾಗಿ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂದರು.
ರಾಜ್ಯದ ರೈತರಿಗೆ ‘ನೆಮ್ಮದಿ ಸುದ್ದಿ’ ; ಬರ ಪರಿಹಾರದ ಮೊತ್ತ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಸಿಎಂ ಸೂಚನೆ
ಪ್ರಜ್ವಲ್ ರೇವಣ್ಣಗೆ ಬಿಗ್‌ಶಾಕ್: ಪಾಸ್ ಪೋರ್ಟ್’ ರದ್ದತಿ ಪ್ರಕ್ರಿಯೆ ಆರಂಭ, ಶೀಘ್ರದಲ್ಲಿ ಬಂಧನ!