ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ನಗರಾಭಿವೃದ್ದಿ ಪ್ರಾಧಿಕಾರಗಳ ಕನಿಷ್ಟ 100 ಎಕರೆ ಜಮೀನನ್ನು ಖರೀದಿಸಿ ಅದನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಬೇಕೆಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್ ಸುರೇಶ (ಬೈರತಿ) ರವರು ಸೂಚಿಸಿದರು.
ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ಕಾಮಗಾರಿಗಳು, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.
ಖಾಸಗಿ ಲೇಔಟ್ ನಿರ್ಮಾಣ ಮಾಡಿರುವವರಿಗೆ ನಕ್ಷೆ ಮತ್ತು ಲೇಔಟ್ ಅನುಮೋದನೆ ನೀಡುವ ಬದಲು ಆಯ ಪ್ರಾಧಿಕಾರಗಳ ವತಿಯಿಂದ ನೀವೆ ಜಮೀನನ್ನು ಗುರುತಿಸಿ ಖರೀದಿ ಮಾಡಿ ಅಭಿವೃದ್ಧಿ ಪಡಿಸಿ ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ನೀಡಲು ಮುಂದಾಗಬೇಕೆಂದು ತಾಕೀತು ಮಾಡಿದರು.
ಸಾಧ್ಯವಾದ ಮಟ್ಟಿಗೆ ಸರ್ಕಾರಿ ಜಮೀನುಗಳನ್ನು ಗುರುತಿಸಲು ಪ್ರಾಧಿಕಾರಗಳ ಆಯುಕ್ತರು ಮುಂದಾಗಬೇಕು. ಒಂದು ಪಕ್ಷ ಸಾಧ್ಯವಾಗದಿದ್ದಲ್ಲಿ ಕೃಷಿಯೇತರ ಜಮೀನುಗಳನ್ನು ಗುರುತಿಸಿ ಸಂಬಂಧಿಸಿದ ರೈತರೊಂದಿಗೆ ಮಾತನಾಡಿ 50:50 ಅನುಪಾತದಲ್ಲಿಯಾದರು ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ ಕೈಗೊಂಡಿರುವ ಕೆರೆ ಅಭಿವೃದ್ದಿ, ಪಾರ್ಕ್ ಅಭಿವೃದ್ದಿ, ರಸ್ತೆ ಅಭಿವೃದ್ದಿ, ಮೇಲ್ ಸೇತುವೆ ನಿರ್ಮಾಣದಂತಹ ಯಾವುದೇ ಯೋಜನೆಗಳನ್ನು ಆಯಾ ನಗರಾಭಿವೃದ್ದಿ ಪ್ರಾಧಿಕಾರಗಳ ವತಿಯಿಂದಲೇ ನಿರ್ಮಾಣ ಕಾರ್ಯವಾಗಬೇಕು ಮತ್ತು ನಿರ್ಮಾಣದ ನಂತರ ಪ್ರಾಧಿಕಾರದ ಹೆಸರುಗಳನ್ನು ನಮೂದಿಸಬೇಕೆಂದು ಸಚಿವರಾದ ಬೈರತಿ ಸುರೇಶ್ ಸೂಚಿಸಿದರು.
ಬಹಳಷ್ಟು ಪ್ರಾಧಿಕಾರಗಳ ಯಾವುದೇ ಬಡಾವಣೆಗಳನ್ನು ನಿರ್ಮಿಸದೆ ಕೇವಲ ಖಾಸಗಿಯವರು ನಿರ್ಮಿಸಿರುವ ಬಡಾವಣೆಗಳಿಗೆ ಅನುಮೋದನೆ ನೀಡುವುದನ್ನು ರೂಢಿ ಮಾಡಿಕೊಂಡಿದೆ ಇದರಿಂದಾಗಿ ಪ್ರಾಧಿಕಾರಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದು ಮುಚ್ಚ ಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ತಾವುಗಳು ಅಸ್ಪದ ನೀಡದೇ ಮೇಲೆ ಹೇಳಿದಂತೆ ಜಮೀನನ್ನು ಖರೀದಿಸಿ ಅಭಿವೃದ್ದಿ ಪಡಿಸಿ ಜನ ಸಾಮಾನ್ಯರಿಗೆ ನಿವೇಶನಗಳನ್ನು ನೀಡಬೇಕೆಂದು ಸಚಿವರಾದ ಬೈರತಿ ಸುರೇಶ್ ಸೂಚಿಸಿದರು.
ಖಾಸಗಿ ಸಂಸ್ಥೆಗಳಿಂದ ನಿರ್ಮಿಸಲಾಗುತ್ತಿರುವ ಬಡಾವಣೆಗಳಿಗೆ ಆಯಾ ನಗರಾಭಿವೃದ್ದಿ ಪ್ರಾಧಿಕಾರಗಳು ಅನುಮೋದನೆ ನೀಡುವ ಬದಲು ಸರ್ಕಾರದ ವತಿಯಿಂದ ಸ್ವಂತ ಬಡಾವಣೆಗಳನ್ನು ನಿರ್ಮಿಸಿದರೆ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ ಎಂದು ಶ್ರೀ ಬೈರತಿ ಸುರೇಶ ಪ್ರಾಧಿಕಾರ ಆಯುಕ್ತರುಗಳಿಗೆ ತಿಳಿ ಹೇಳಿದರು.
ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ನಗರಾಭಿವೃದ್ದಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ವೆಂಕಟಾಛಲಪತಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಾದ ತಿಪ್ಪೇಸ್ವಾಮಿ, ನಗರಾಭಿವೃದ್ದಿ ಇಲಾಖೆಯ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಕೆಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) ಮತ್ತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ (BMRDA) ಹೊರತುಪಡಿಸಿ ರಾಜ್ಯ ಉಳಿದ 30 ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು.
ಮೇ.23ರಂದು ಬುದ್ಧಪೂರ್ಣಿಮಾ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ
‘ಮೊದಲು ಇಂಡಿಯಾ ಮೈತ್ರಿ ಮುರಿದು ಬಿದ್ದಿತು, ನಂತ್ರ ಕುಸಿಯಿತು ಮತ್ತು ಈಗ ಸಂಪೂರ್ಣವಾಗಿ ಸೋತಿದೆ’ : ಪ್ರಧಾನಿ ಮೋದಿ