ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಇಂದು ಪ್ರಕಟಗೊಂಡಿದೆ. ಹಾಜರಾದಂತ ವಿದ್ಯಾರ್ಥಿಗಳಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. ದಿನಾಂಕ 29-04-2024ರಿಂದ 16-05-2024ರವರೆಗೆ ಒಟ್ಟು 301 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಿತು. ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕಾರ್ಯವು ಒಟ್ಟು 28 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ 15-05-2024ರಿಂದ 18-05-2024ರವರೆಗೆ 7875 ಮೌಲ್ಯ ಮಾಪಕರಿಂದ ನಡೆಸಲಾಯಿತು ಎಂದು ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಈಗ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು https://kseab.karnataka.gov.in ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ 1,49,824 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 1,48,942 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 52,505 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.35.25ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ 84,632 ಬಾಲಕರು ಹಾಜರಾಗಿದ್ದರು. ಇವರಲ್ಲಿ 26,496 ಬಾಲಕರು ಉತ್ತೀರ್ಣರಾಗಿದ್ದಾರೆ. ಶೇ.31.31ರಷ್ಟು ಫಲಿತಾಂಶ ಬಂದಿದೆ. 64,310 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 26,009 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶೇ.40.44ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ
‘ಮೊದಲು ಇಂಡಿಯಾ ಮೈತ್ರಿ ಮುರಿದು ಬಿದ್ದಿತು, ನಂತ್ರ ಕುಸಿಯಿತು ಮತ್ತು ಈಗ ಸಂಪೂರ್ಣವಾಗಿ ಸೋತಿದೆ’ : ಪ್ರಧಾನಿ ಮೋದಿ
ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನೆ