ಗುಬ್ಬಿ: ರಾಜಸ್ವ ನಿರೀಕ್ಷಕಯೊಬ್ಬರು ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಜಮೀನಿನ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿ.ಎಸ್.ಪುರ ಹೋಬಳಿಯ ರಾಜಸ್ವ ನಿರೀಕ್ಷಕ ನರಸಿಂಹಮೂರ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಿ.ಎಸ್.ಪುರ ಹೋಬಳಿ ಗದ್ದೆಹಳ್ಳಿ ಗ್ರಾಮದ ನಾಗರಾಜು ಅವರಿಗೆ ಖಾತೆ ಬದಲಾವಣೆ ಮಾಡಿಕೊಡಲು 10 ಸಾವಿರ ಲಂಚ ಕೇಳಿದ್ದರು.
ಹಣ ನೀಡಲು ಒಪ್ಪದ ರೈತ ನಾಗರಾಜು ಲೋಕಾಯುಕ್ತರಿಗೆ ದೂರು ನೀಡಿದ್ದರು. ಬುಧವಾರ ಸಿ.ಎಸ್.ಪುರ ನಾಡ ಕಚೇರಿಯಲ್ಲಿ ಹಣ ನೀಡುವ ಸಂದರ್ಭದಲ್ಲಿ ಹಣದ ಸಮೇತ ನರಸಿಂಹಮೂರ್ತಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನರಸಿಂಹಮೂರ್ತಿ 2023ರ ಜುಲೈ 7ರಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವಾಗ ನಿವೇಶನದ ಖಾತೆ ಮಾಡಿಕೊಡಲು ಫಯಾಜ್ ಎಂಬುವರಿಗೆ 15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.