ಬೆಂಗಳೂರು : ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಶಿಫಾರಸ್ಸು ಮಾಡದೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾ ಲಯ ಕಾನೂನು ಕ್ರಮ ಜರುಗಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹೌದು ನಕಲಿ ಜಾತಿ ಪ್ರಮಾಣ ಪ್ರಮಾಣ ಪತ್ರ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಆರೋಪ ಸಂಬಂಧ ಕೇಂದ್ರ ಶಿಪ್ಪಿಂಗ್ ಸಚಿವಾಲಯದಲ್ಲಿ ಸಹಾಯಕ ಲೈಟ್ ಕೀಪರ್‌ಆಗಿ ಸೇವೆ ಸಲ್ಲಿಸುತ್ತಿದ್ದ ಎ.ಎಸ್. ಪಳನಿ ಎಂಬುವವರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ ಅವರ ಪೀಠ ಈ ಸ್ಪಷ್ಟನೆ ನೀಡಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳ (ಮೀಸಲಾತಿ ಮತ್ತು ನೇಮಕಾತಿ ಇತರೆ) ಅಧಿನಿಯಮ 1992ರ ನಿಯಮ 7ರ ಪ್ರಕಾರ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಬೇಕು.
ಆ ಬಳಿಕವೇ ಜಾರಿ ನಿರ್ದೇಶನಾಲಯ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಪೀಠ ಹೇಳಿದೆ.ಈ ಪ್ರಕರಣದಲ್ಲಿ ಅಕ್ರಮವಾಗಿ ಜಾತಿ ಪ್ರಮಾಣ ಪತ್ರ ಪಡೆದ ಸಂಬಂಧ ಅರ್ಜಿದಾರರ ವಿರುದ್ದ ಕಾನೂನು ಕ್ರಮ ಜರುಗಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಶಿಫಾರಸು ಮಾಡಿದ್ದಾರೆ. ಆದ್ದರಿಂದ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಫ್‌ಐಆರ್ ಮತ್ತು ಅದರ ಆಧಾರದಲ್ಲಿ ದಾಖಲಿಸಿರುವ ಆರೋಪ ಪಟ್ಟಿ ರದ್ದುಪಡಿಸ ಲಾಗುತ್ತಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.