ನವದೆಹಲಿ : ನಿನ್ನೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಇದೀಗ ಈ ಒಂದು ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಲಕ್ಷ್ಮಿ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಅರ್ಜುನ್ ಸಕ್ಸೇನಾ ಎಂದು ಹೇಳಲಾಗುತ್ತಿದ್ದು, ಮೂಲತಃ ಈತ ಉತ್ತರ ಪ್ರದೇಶದ ಇಟಾವಾದಿಂದ 12 ನೇ ತರಗತಿ ಪರೀಕ್ಷೆಯೊಂದಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಯ ದೇಹವು ಪೇಯಿಂಗ್-ಗೆಸ್ಟ್(PG) ವಸತಿಗೃಹದಲ್ಲಿ ಕೋಣೆಯೊಂದರಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಬಿಎಸ್ಇ ಪಿಯು ಪರೀಕ್ಷೆಗಳಲ್ಲಿ ಅವರು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದು, ಖಿನ್ನತೆಗೆ ಒಳಗಾಗಿದ್ದ ಎಂದು ವಸತಿಗೃಹದಲ್ಲಿ ಉಳಿದುಕೊಂಡಿರುವ ಇತರರ ಹೇಳಿಕೆಗಳನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಬಗ್ಗೆ ಸಕ್ಸೇನಾ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ. ಸಾವಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.