ಕಲಬುರಗಿ : ವಿವಾಹಿತ ಮಹಿಳೆಯೊಬ್ಬಳ ಜೊತೆ ಯುವಕನೊಬ್ಬ ಅನೈತಿಕ ಸಂಬಂಧ ಹೊಂದಿದ್ದ ಎಂದು ತಿಳಿದ ಮಹಿಳೆಯ ಕುಟುಂಬದವರು, ಆತ ಒಬ್ಬಂಟಿಯಾಗಿ ಸಿಗುವುದಕ್ಕೆ ಕಾದು ಆತನ ಮೇಲೆ ಹಲ್ಲೆ ನಡೆಸಿ ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಮಣ್ಣೂರಿನಲ್ಲಿ ನಡೆದಿದೆ.
ಮಣ್ಣೂರಿನ ರಂಜಾನ್ ಮೆಹಬೂಬ್ ತಾರಾ ವ್ಯಕ್ತಿ ಕೊಲೆಯಾಗಿದ್ದು, ಅದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಈ ರಂಜಾನ್ ಮೆಹಬೂಬ್ ಅನೈತಿಕ ಸಂಬಂಧ ಹೊಂದ್ದಿದ್ದ. ಆಕೆ ಗಂಡ ದುಬೈನಲ್ಲಿ ಇರುವುದರಿಂದ ಈ ರಂಜಾನ್ ಜೊತೆ ಕದ್ದು ಮುಚ್ಚಿ ಇಬ್ಬರು ಸೇರುತ್ತಿದ್ದರಂತೆ. ಇದನ್ನ ನೋಡಿದ್ದ ಮಹಿಳೆ ಕುಟುಂಬಸ್ಥರು ಹತ್ತಾರು ಭಾರಿ ಕರೆದು ರಾಜಿ ಪಂಚಾಯಿತಿ ಮಾಡಿದ್ದಾರೆ.
ಆದರೂ ರಾಜಿ ಪಂಚಾಯಿತಿ ಹಾಗೂ ಎಚ್ಚರಿಕೆಗೂ ಕೂಡ ರಂಜಾನ್ ಮೆಹಬೂಬ್ ತಲೆ ಕೆಡಿಸಿಕೊಳ್ಳದೆ ಮಹಿಳೆಯ ಜೊತೆ ಸಂಬಂಧವನ್ನು ಮುಂದುವರೆಸಿದ್ದ. ಇದರಿಂದ ಕುಪಿತಗೊಂಡ ಮಹಿಳೆಯ ಕುಟುಂಬಸ್ಥರು ಈತನಿಗೆ ಒಂದು ಗತಿ ಕಾಣಿಸಬೇಕೆಂದು ನಿನ್ನೆ ಆತ ಹೊಲದ ಕಡೆಯಿಂದ ಒಬ್ಬನೇ ವಾಪಸ್ ಮರಳುತ್ತಿದ್ದಾಗ, ಗ್ರಾಮದ ಹೊರವಲಯದಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಎಸ್ಪಿ ಅಕ್ಷಯ್, ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸಿದರು.
ಅಲ್ಲದೆ ಇತ್ತ ಅಫಜಲಪುರ ಪೊಲೀಸರು ಸಂತೋಷ್, ರಾಕೇಶ್, ಆಕಾಶ್, ಪ್ರದೀಪ್ ಎನ್ನುವ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಆರೋಪಿ ಸಂತೋಷನ ಅತ್ತಿಗೆಯ ಜೊತೆ ಈ ರಂಜಾನ್ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕಾಗಿಯೇ ಕೊಲೆ ಮಾಡಲಾಗಿದೆಯಂತೆ. ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.