ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಕರಣವನ್ನು ಸಿವಿಐಗೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುವ ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿ ಎಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಿ ಎನ್ನುವ ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ಬಿಜೆಪಿಯವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ? ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬಾಗಿದೆ. ಸಂತ್ರಸ್ತೆ ದೂರಿನ ಮೇಲೆ ದೇವರಾಜ ಗೌಡನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ನಾವು ಪೊಲೀಸ್ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುತ್ತಿಲ್ಲ.ತನಿಖೆ ಮಾಡಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜವಾಬ್ದಾರಿಯಿಂದ ಮಾತನಾಡಲಿ. ಪರೇಶ್ ಮೇಸ್ತ ಕೇಜ್ ಸಿಬಿಐಗೆ ಕೊಟ್ಟಿದ್ದೆವು ಆದರೆ ಆ ಕೇಸ್ ಏನಾಯಿತು? ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರು.ಎಸ್ಐಟಿ ಸರಿಯಾದ ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಸಿಬಿಐ ಎಂದರೆ ಕರಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಅಂದಿದ್ರು. ಬಿಜೆಪಿ ಸರ್ಕಾರ ಇದ್ದಾಗ ಎಷ್ಟೋ ಕೇಸ್ ಸಿಬಿಐಗೆ ಕೊಡಿ ಎಂದಿದ್ದೆವು.ಯಾವುದಾದರೂ ಒಂದು ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ರಾ? ಸಿಬಿಐಗೆ ಕೊಡುವಂತೆ ಆಗ್ರಹ ಮಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.