ಅರಸೀಕೆರೆ : ರಾಜ್ಯದಲ್ಲಿ ಅತಿ ಹೆಚ್ಚು ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ ಶ್ರೇಯಸ್ಸು ದೇವೇಗೌಡರದ್ದಾಗಿದೆ. ಅರಸೀಕೆರೆ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಿ ಬಚಾವಾದರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಅರಸೀಕೆರೆಯಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿವಲಿಂಗೇಗೌಡರು ಕ್ಷೇತ್ರದ ಅಭಿವೃದ್ದಿಗೆ ಕೇಳುವ ಎಲ್ಲಾ ಕೆಲಸಗಳಿಗೆ ಸಹಿ ಹಾಕಲು ನಾನು ಸಿದ್ಧನಿದ್ದೇನೆ. ಶಿವಲಿಂಗೇಗೌಡರನ್ನು ಮಂತ್ರಿ ಮಾಡುವ ಜವಾಬ್ದಾರಿಯನ್ನೂ ನನಗೆ ಬಿಡಿ, ಇದಕ್ಕಾಗಿ ಶ್ರೇಯಸ್ ಪಟೇಲ್ ಅವರನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿಕೊಡಿ ಸಾಕು ಎಂದರು.
ದೇವೇಗೌಡರು ತಮ್ಮ ಕುಟುಂಬದ ರಾಜಕೀಯ ಹಿತಾಸಕ್ತಿಗಾಗಿ ಮೋದಿಯವರನ್ನು ಎದ್ವಾತದ್ವಾ ಹೊಗಳುತ್ತಿದ್ದಾರೆ. Narendra Modi ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೀನಿ ಎಂದಿದ್ದ ದೇವೇಗೌಡರೇ, ಈಗ ಮೋದಿಯವರು ರಾಜ್ಯದ ಜನತೆಯ ಕೈಗೆ ನೀಡಿದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ಹೊಗಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇವೇಗೌಡರ ಅಳಿಯ ಬೆಂಗಳೂರು ಗ್ರಾಮಾಂತರದಲ್ಲಿ, ಮಗ ಮಂಡ್ಯದಲ್ಲಿ, ಮೊಮ್ಮಗ ಹಾಸನದಲ್ಲಿ ಸ್ಪರ್ಧಿಸಿದ್ದಾರೆ. ಇವರಿಗೆ ತಮ್ಮ ಕುಟುಂಬದ ಆಚೆ ಅಭ್ಯರ್ಥಿಗಳೇ ಕಾಣುತ್ತಿಲ್ಲ. ಹೀಗಾಗಿ ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಮನೆಗೆ ಕಳುಹಿಸಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿಕೊಡಿ ಎಂದರು.