ಚಿತ್ರದುರ್ಗ : ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಪತಿ 1.3 ಕೋಟಿ ರೂ.ಗಳನ್ನು ಕಳೆದುಕೊಂಡ ನಂತರ ಪತ್ನಿ ಸಾಲಗಾರರ ಕಿರುಕುಳದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ 24 ವರ್ಷದ ರಂಜಿತಾ ವಿ ಎಂಬ ಮಹಿಳೆ ಕುಟುಂಬ ಮತ್ತು ಎರಡು ವರ್ಷದ ಮಗನನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರ್ಚ್ 19 ರಂದು ರಂಜಿತಾ ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತನ್ನ ಅಳಿಯ ದರ್ಶನ್ ಬಾಲುಗೆ 13 ಜನರು ಸಾಲ ನೀಡಿದ್ದಾರೆ ಎಂದು ಆಕೆಯ ತಂದೆ ವೆಂಕಟೇಶ್ ಎಂ ದೂರು ನೀಡಿದ್ದಾರೆ. ಸಾಲಗಾರರ ನಿರಂತರ ಕಿರುಕುಳದಿಂದಾಗಿ ತಾನು ಮತ್ತು ತನ್ನ ಪತಿ ಎದುರಿಸಿದ ಹಿಂಸೆಯನ್ನು ರಂಜಿತಾ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ರಾಜ್ಯ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ದರ್ಶನ್, ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಮೂಲಕ ಸಾಕಷ್ಟು ಸಾಲ ಮಾಡಿದ್ದರು. ಸಾಲ ಮರುಪಾವತಿಸುವಂತೆ ಸಾಲಗಾರರು ಕಿರುಕುಳ ನೀಡುತ್ತಿದ್ದರು ಈ ಹಿನ್ನೆಲೆಯಲ್ಲಿ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.