ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಅಗತ್ಯವಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚನೆ ನೀಡಿದರು.
ಲೋಕಸಭಾ ಚುನಾವಣೆ-2024ರ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ಚುನಾವಣೆ ಸಂಬಂಧ ನಡೆಸಲಾಗುವ ಸಭೆ-ಸಮಾರಂಭಗಳು, ಪ್ರಚಾರ ಕಾರ್ಯಕ್ರಮಗಳಿಗೆ, ವಾಹನ ಬಳಕೆಗಾಗಿ ಅನುಮತಿ ನೀಡಲು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕ ಗವಾಕ್ಷಿ ಸಮಿತಿ ರಚಿಸಲಾಗಿದೆ. ರಾಜಕೀಯ ಪಕ್ಷಗಳು ಅನುಮತಿಗಾಗಿ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ರಾಜಕೀಯ ಪಕ್ಷಗಳು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಭಾರತ ಚುನಾವಣಾ ಆಯೋಗವು “ಸುವಿಧಾ ಆಪ್” ಪರಿಚಯಿಸಿದ್ದು, ಈ ಆಪ್ ಮೂಲಕ ಅಥವಾ ಖುದ್ದಾಗಿ ಎಆರ್ಓ ಕಚೇರಿಗೆ ಭೇಟಿ ನೀಡಿ ಅನುಮತಿ ಪಡೆಯಬಹುದಾಗಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ಮತ್ತು ವಾಹನ ಪರವಾನಿಗೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯಬೇಕು. ಸ್ಟಾರ್ ಪ್ರಚಾರಕರು ಹಾಗೂ ಪ್ರಚಾರ ಸ್ಥಳಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆಯು ಎಲ್ಲಾ ಪಕ್ಷಗಳು, ಅಭ್ಯರ್ಥಿಗಳಿಗೂ ಅನ್ವಯವಾಗಲಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮಗಳನ್ನು ಪಾಲನೆ ಮಾಡುವುದರಿಂದ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಸಹ ಸಹಕಾರ ನೀಡಬೇಕೆಂದರು.