ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಗಳಿಸಲಿದೆ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಗೆಲ್ಲುವುದು ಖಚಿತ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಡಬಲ್ ರೋಡ್ ಬಳಿ ಮಿಷನ್ ರೋಡ್ ನ ಪಿ.ಸಿ.ಮೋಹನ್ ಅವರ ಕಚೇರಿಯ ಮೊದಲನೇ ಮಹಡಿಯಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ 3ನೇ ಬಾರಿ ಪ್ರಮಾಣವಚನ ಪಡೆಯುವುದನ್ನು ಯಾವ ದುಷ್ಟ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ನರೇಂದ್ರ ಮೋದಿಜೀಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಕೇ ಸಾಥ್ ಎಂದು ಯಾವಾಗಲೂ ಹೇಳುತ್ತಾರೆ. ಮೋದಿಜೀಯವರು 2047ರ ಹೊತ್ತಿಗೆ ಈ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಪಿ.ಸಿ.ಮೋಹನ್ ಅವರು ಜನರಿಂದ ಆಯ್ಕೆಯಾಗಿ ಜನರಿಗಾಗಿ ಮತ್ತು ಜನರಿಗೋಸ್ಕರ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ದೇಶದ ಅಭಿವೃದ್ಧಿ ಮತ್ತು ಈ ಭಾಗದ ಅಭಿವೃದ್ಧಿಗಾಗಿ ಮೋಹನ್ ಅವರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಲು ಶ್ರಮಿಸಿ ಎಂದು ಮನವಿ ಮಾಡಿದರು.
ಮೋದಿಜೀ ಅವರು ತಮ್ಮ ಸರಕಾರದ ಮೂಲಕ ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಜನರು ಗೆಲ್ಲಿಸುತ್ತಾರೆ. ಈ ಮೂಲಕ ‘ರಾಜ್ಯಕ್ಕೆ ಮೋದಿಯವರ ಕೊಡುಗೆ ಏನು?’ ಎಂಬ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ಮಾತನಾಡಿ, ಇಂದು ಬಂದ ಕಾರ್ಯಕರ್ತರ ಹುಮ್ಮಸ್ಸನ್ನು ಗಮನಿಸಿದರೆ ಇದು ವಿಜಯೋತ್ಸವದಂತಿದೆ ಎಂದು ಹೇಳಿದರು. ಮೋದಿಯವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರರಹಿತ ಅಭಿವೃದ್ಧಿಪರ ಆಡಳಿತ ನೀಡಿದ್ದಾರೆ. 2014ರಲ್ಲಿ ನಾವು ಮತ ಕೇಳಲು ಹೋದಾಗ ಕಾಂಗ್ರೆಸ್- ಯುಪಿಎ ಸರಕಾರದ 10 ವರ್ಷಗಳ 2 ಜಿ ಸಹಿತ ವಿವಿಧ ಭ್ರಷ್ಟಾಚಾರ ಹಗರಣಗಳ ಪುಸ್ತಕವನ್ನೇ ಒಯ್ದಿದ್ದೆವು ಎಂದು ನೆನಪಿಸಿದರು.
ಶಾಸಕ ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ, 40 ದಿನಗಳ ಬಳಿಕ ಪಿ.ಸಿ.ಮೋಹನ್ ಅವರು ಮತ್ತೆ ಸಂಸದರಾಗುವುದು ಖಚಿತ ಎಂದರಲ್ಲದೆ, ನಾವು ರಾತ್ರಿಯನ್ನು ಹಗಲು ಮಾಡಿ, ಹಗಲನ್ನು ಇನ್ನಷ್ಟು ಹಗಲಾಗಿ ಮಾಡಿ ಕೆಲಸ ಮಾಡಬೇಕು. ಮೋದಿಜೀ ಅವರ ಸಾಧನೆಯನ್ನು ಮನೆ, ಮನಗಳಿಗೆ ಮುಟ್ಟಿಸುವ ಕಾರ್ಯ ನಮ್ಮಿಂದ ಆಗಲಿ ಎಂದು ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್. ರಘು, ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮುಖಂಡ ಭಾಸ್ಕರ ರಾವ್, ಪಾಲಿಕೆ ಮಾಜಿ ಸದಸ್ಯರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಂಗಳೂರಿನ ‘ನೀರಿನ ಟ್ಯಾಂಕರ್’ ಮಾಲೀಕರಿಗೆ ಮಹತ್ವದ ಮಾಹಿತಿ: ಈ ‘ಸ್ಟಿಕ್ಕರ್’ ಅಂಟಿಸುವುದು ಕಡ್ಡಾಯ
‘ಚುನಾವಣಾ ಬಾಂಡ್’ ಅಂಕಿಅಂಶ ಬಹಿರಂಗ: ಯಾವ ಪಕ್ಷ? ಎಷ್ಟು ‘ದೇಣಿ’ಗೆ ಸ್ವೀಕಾರ? ಇಲ್ಲಿದೆ ಮಾಹಿತಿ | Electoral bonds