ಮಂಡ್ಯ: ಜಿಲ್ಲೆಯಲ್ಲಿ ಇಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ನಾನು ಮತ್ತು ಸಿದ್ದರಾಮಯ್ಯ ಅವರು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಮಂಡ್ಯದ 8 ವಿಧಾನಸಭಾ ಸ್ಥಾನಗಳಲ್ಲಿ 7ರಲ್ಲಿ ಗೆಲ್ಲಿಸಿ, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಕೊಟ್ಟ ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ ಎಂದರು.
ದೇವರು ವರ ಮತ್ತು ಶಾಪ ಕೊಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ನೀವು ನಮಗೆ ಕೊಟ್ಟ ಅವಕಾಶದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಮೊದಲ ಕ್ಯಾಬಿನೆಟ್ ನಲ್ಲೆ ಈ ಯೋಜನೆಗಳಿಗೆ ನಮ್ಮ ಸರ್ಕಾರ ಅನುಮೋದನೆ ನೀಡಿತು. ಆಮೂಲಕ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಮಾದರಿಯಾಗಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, ಗೃಹಲಕ್ಷ್ಮೀ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ ಅಕ್ಕಿ ಅದರಲ್ಲಿ 5 ಕೆ.ಜಿ ಅಕ್ಕಿಯ ಹಣ, ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿರುವ ತಾಯಂದಿರಿಗೆ 2 ಸಾವಿರ ಹಣ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಅಕ್ಕಿ ಹಾಗೂ ಹಣ ಸಿಗುತ್ತಿದೆಯಲ್ಲವೆ? ಮಂಡ್ಯದಲ್ಲಿ 97% ರಷ್ಟು ಮನೆಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿವೆ. ಇವರಿಗೆ ಶೂನ್ಯ ಬಿಲ್ ಸಿಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಕೊಟ್ಟಿದ್ದರೆ? ಎಂದು ಕೇಳಿದರು.
ಚುನಾವಣೆಗೂ ಮುನ್ನ ಒಂದು ಮಾತು ಹೇಳುತ್ತಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು. ಕುಮಾರಣ್ಣ ತೆನೆ ಹೊತ್ತ ಮಹಿಳೆಯನ್ನು ನೂಕಿ ಕಮಲದ ಹಿಡಿದರು. ಐದು ವ್ಯಾ ಎಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ರಾಜ್ಯ ಸಮೃದ್ಧಿಯಾಯಿತು. ಕರ್ನಾಟಕ ರಾಜ್ಯ ಪ್ರಬುದ್ಧವಾಯಿತು ಎಂದರು.
ನಾವು ಜೀವನದಲ್ಲಿ ಯಶಸ್ಸು ಸಾಧಿಸಲು ಧರ್ಮರಾಯನ ಧರ್ಮತ್ವ ಇರಬೇಕು, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿದುರನ ನೀತಿ, ಕೃಷ್ಣನ ತಂತ್ರ ಇರಬೇಕು. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷವಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ. ನೀವೆಲ್ಲ ಸೇರಿ ದಿನೇಶ ಗೂಳಿಗೌಡ, ಮಧು ಮಾದೇಗೌಡ ಅವರನ್ನು ಪರಿಷತ್ ಸದಸ್ಯರನ್ನಾಗಿ, 6 ಶಾಸಕರನ್ನು ಆಯ್ಕೆ ಮಾಡಿದಿರಿ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು ಎಂದು ಕಿಡಿಕಾರಿದರು.
ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರ ಇತ್ತು. ಆದರೆ ನಾವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಕಾವೇರಿ ಭಾಗದಲ್ಲಿ ಕೆರೆ ತುಂಬಿಸಲು ಕಾಲುವೆ ಅಭಿವೃದ್ಧಿಗೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ಕೆಆರ್ ಎಸ್ ಪ್ರವಾಸಿ ತಾಣ ಮಾಡಲು ಟೆಂಡರ್ ಕರೆಯಲಾಗಿದೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಹೋರಾಟ ಮಾಡಿದ್ದೆ ನಿಮಗಾಗಿ. ಇದು ಕೇವಲ ಬೆಂಗಳೂರಿಗೆ ಮಾತ್ರ ಪ್ರಯೋಜನವಲ್ಲ. ಅಲ್ಲಿ 64 ಟಿಎಂಸಿ ನೀರು ಇದ್ದರೆ, ಸಂಕಷ್ಟದ ಸಮಯದಲ್ಲಿ ಅಲ್ಲಿಂದ ತಮಿಳುನಾಡಿಗೆ ನೀರು ಬಿಟ್ಟು ಕೆಆರ್ ಎಸ್, ಕಬಿನಿ, ಹಾರಂಗಿಯ ನೀರನ್ನು ಈ ಭಾಗದ ಜನರ ಬಳಕೆಗೆ ನೀಡಬಹುದು ಎಂದರು.
ನಾವು ತಮಿಳುನಾಡಿಗೆ ಬಗ್ಗಲಿಲ್ಲ. ನಮ್ಮ ರೈತರು ಬದುಕಿದ ನಂತರ ನಿಮಗೆ ನೀರು ಬಿಡುತ್ತೇವೆ ಎಂದು, ನಿಮ್ಮ ಬೆಳೆಗೆ ನೀರು ಹರಿಸಿದ ನಂತರ ತಮಿಳುನಾಡಿಗೆ ನೀರು ಬಿಟ್ಟೆವು. ನಾವು ನಿಮ್ಮ ಬೆಳೆಯನ್ನು ರಕ್ಷಣೆ ಮಾಡಿದ್ದೇವೆಯೇ ಇಲ್ಲವೇ ಎಂಬುದನ್ನು ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ. ಕಷ್ಟ ಕಾಲದಲ್ಲೂ ನಿಮ್ಮ ಬೆಳೆ ಉಳಿಸಿದ್ದೇವೆ. ಈಗ ನೆಂಟಸ್ತನ ಬೆಳೆಸಿರುವ ಜೆಡಿಎಸ್, ಬಿಜೆಪಿ ನಾಯಕರು ಒಂದು ದಿನವಾದರೂ ನಿಮ್ಮ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರಾ? ದೇವೇಗೌಡರು ಈಗ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರ ಕಣ್ಣೀರು ಅವರ ಕುಟುಂಬಕ್ಕೆ ಸೀಮಿತವಾಯಿತೇ ಹೊರತು ಬಡ ಜನರಪರವಾಗಿ ಇಲ್ಲ ಎಂದು ಹೇಳಿದರು.
ಜನರು ಈಗ ಜಾಗೃತರಾಗಬೇಕು. ಉಳಿ ಪೆಟ್ಟು ಬೀಳದೆ ಯಾವ ಕಲ್ಲು ಶಿಲೆ ಆಗುವುದಿಲ್ಲ. ನೇಗಿಲು ಹಾಕದೆ ಯಾವ ಭೂಮಿಯಲ್ಲೂ ಬೆಳೆ ಬೆಳೆಯಲು ಆಗುವುದಿಲ್ಲ. ನಾವು ನೀವು ಶ್ರಮ ಪಟ್ಟಾಗ ಮಾತ್ರ ನಾವು ಅಭಿವೃದ್ಧಿ ಕಾಣಲು ಸಾಧ್ಯ. ನಮ್ಮ ಈ ಗ್ಯಾರಂಟಿ ಯೋಜನೆಗಳು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ರಕ್ಷಣೆಗೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಮಕ್ಕಳ ಶಾಲಾ ಶುಲ್ಕ, ಎಲ್ಲಾ ಪದಾರ್ಥ ಬೆಲೆ ಏರಿಕೆಯಾಗಿದೆ. ನಮ್ಮ ಯೋಜನೆಗಳಿಂದ ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯ ಆಗುತ್ತಿದೆ. ಈ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ 52 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದಾರೆ ಎಂದರು.
ನಿಮ್ಮ ಋಣ ತೀರಿಸಿದ ತೃಪ್ತಿ ನಮಗಿದೆ. ಮಂಡ್ಯ ಕಾರ್ಖಾನೆ, ನದಿ, ಕಾಲುವೆಗಳನ್ನು ಹೊಸ ಮಾದರಿಯಾಗಿ ಮಾಡಿ ನಿಮ್ಮ ಜೀವನದಲ್ಲಿ ಬದಲಾವಣೆ ತರಲಾಗುವುದು. ಅಂಬರೀಶ್ ಅವರು ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅವರ ಹೆಸರಲ್ಲಿ ರಸ್ತೆ ಮಾಡಲು ನಮ್ಮ ನಾಯಕರು ತೀರ್ಮಾನಿಸಿದ್ದಾರೆ. ಅಂಬರೀಶ್ ಅವರ ಸ್ನೇಹಿತರಾದ ಸ್ಟಾರ್ ಚಂದ್ರು ಅವರನ್ನು ಲೋಕ ಸಭೆ ಅಭ್ಯರ್ಥಿಯಾಗಿ ಮಾಡಿದ್ದೇವೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಚಂದ್ರು ಅವರು ಗೆಲ್ಲುವುದು ಅಷ್ಟೇ ಸತ್ಯ ಎಂದರು.
ಮಂಡ್ಯದ ಅಭಿವೃದ್ಧಿಗೆ ನಾವು ಬದ್ಧ. ಮಂಡ್ಯ ಕಾರ್ಖಾನೆ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದಾರೆ. ಕೃಷಿ ವಿವಿ ಮಾಡಲು ತೀರ್ಮಾನಿಸಿದ್ದೇವೆ. ಈ ಹಿಂದೆ ಕೃಷ್ಣ ಅವರು, ಮಾದೇಗೌಡರು ಅನೇಕ ಕಾರ್ಯಕ್ರಮ ಕೊಟ್ಟರು. ಈಗ ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಲೋಕಸಭೆ ಚುನಾವಣೆಗೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಕುಮಾರಣ್ಣನ ಮಗನ ಪರವಾಗಿ ನಾನು ಬಂದು ಪ್ರಚಾರ ಮಾಡಿದ್ದೆ ಆದರೆ ಜನ ಒಪ್ಪಲಿಲ್ಲ. ನಾನು ಪ್ರಾಮಾಣಿಕವಾಗಿ ಗೆಲ್ಲಿಸಲು ಪ್ರಯತ್ನ ಮಾಡಿದೆ. ಆದರೆ ಅವರನ್ನು ಅಧಿಕಾರದಿಂದ ಕೆಳಗಿಸಿದವರ ಜೊತೆ ಕೈ ಜೋಡಿಸಿದ್ದಾರೆ. ಇದು ಸರಿಯೋ ತಪ್ಪೊ ನೀವೇ ನಿರ್ಧರಿಸಿ ಎಂದು ತಿಳಿಸಿದರು.
ಮೊನ್ನೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪುಟ್ಟಣ್ಣ ಅವರನ್ನು ಗೆಲ್ಲಿಸಿದರು. ರಾಜ್ಯಸಭೆ ಚುನಾವಣೆಯಲ್ಲೂ ಅಪವಿತ್ರ ಮೈತ್ರಿಗೆ ಸೋಲಾಯಿತು. ಈ ಸರ್ಕಾರ ಮಂಡ್ಯ ಮಹಾಜನತೆ ಸರ್ಕಾರ. ನಿಮ್ಮ ಶಾಸಕರು ಏನು ಹೇಳುತ್ತಾರೋ ಕೆಲಸವನ್ನ ಸರ್ಕಾರ ಮಾಡಲಿದೆ. ಇಲ್ಲಿನ ಶಾಸಕರು ಹಕ್ಕುಪತ್ರ ನೀಡಬೇಕು ಎಂದು ಹೇಳಿದ್ದು ಅದನ್ನು ನಾವು ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ತೆರಿಗೆ ಮೋಸ ಮಾಡಿದೆ. ಡಿ.ಕೆ. ಸುರೇಶ್ ಅವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೋರಾಟ ಮಾಡಿದರೆ ಬಿಜೆಪಿ ಜೆಡಿಎಸ್ ನಾಯಕರು ಟೀಕಿಸಿದ್ದಾರೆ. ನೀವು ಕಟ್ಟಿದ ತೆರಿಗೆ ದುಡ್ಡಿನಲ್ಲಿ ರಾಜ್ಯಕ್ಕೆ ಸರಿಯಾದ ರೀತಿಯಲ್ಲಿ ಪಾಲು ಬರಬೇಕು ಎಂದು ಕೇಳುವುದು ತಪ್ಪಾ? ನಮ್ಮನ್ನು ದೇಶದ್ರೋಹಿ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಸರಿಯಾದ ಪಾಠ ಕಲಿಸಿ ಎಂದರು.
ನೀನು ಹೋರಾಟ ಮಾಡದಿದ್ದರೂ ಮಾರಾಟ ಆಗಬೇಡ ಎಂದು ಅಂಬೇಡ್ಕರ್ ಅವರು ಸಂದೇಶ ಕೊಟ್ಟಿದ್ದಾರೆ. ನಾನು ನಮ್ಮ ಮುಂದಿನ ಪೀಳಿಗೆ ಭವಿಷ್ಯಕ್ಕಾಗಿ ಹೋರಾಟ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಕೇವಲ ಸ್ಟಾರ್ ಚಂದ್ರು ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಚೆಲುವರಾಯಸ್ವಾಮಿ ಅವರು ಅಭ್ಯರ್ಥಿ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.
JDS-BJP ನಾಯಕರು ಒಂದು ದಿನವಾದರೂ ನಿಮ್ಮ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಿದ್ದಾರಾ? – DKS
BREAKING : ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಬಂಧನ