ಕೊಪ್ಪಳ : ಇಡೀ ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರು, ಎಷ್ಟೇ ಮುಂದುವರೆದರು ನಮ್ಮ ದೇಶದ ಇನ್ನೂ ಕೆಲವು ರಾಜ್ಯದ ಹಲವು ಹಳ್ಳಿಗಾಡು ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ.
ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿರುವುದು ಬೇಸರದ ಸಂಗತಿಯಾಗಿದೆ. ಕೊಪ್ಪಳದಲ್ಲಿ ಮತ್ತೊಂದು ಅಸ್ಪೃಶ್ಯತಾ ಆಚರಣೆ ಬೆಳಕಿಗೆ ಬಂದಿದ್ದು, ತಾಲೂಕಿನ ಹಾಲವರ್ತಿಯಲ್ಲಿ ದಲಿತರಿಗೆ ಹೊಟೇಲ್ ಮತ್ತು ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಣೆಯಂತಹ ಘಟನೆ ಮರುಕಳಿಸಿವೆ. ಇದರ ವಿರುದ್ದ ಬುಧವಾರ ಅಲ್ಲಿನ ದಲಿತ ಯುವಕರೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಹೊಟೇಲ್ಗಳಲ್ಲಿ ಪ್ರವೇಶವಿಲ್ಲ, ದಲಿತರಿಗಾಗಿಯೇ ಪ್ರತ್ಯೇಕ ಪ್ಲೇಟ್, ತಟ್ಟೆ ಹಾಗೂ ಅವರು ಎಲ್ಲರ ಜೊತೆ ಕುಳಿತು ತಿನ್ನು ವಂತಿಲ್ಲ. ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ವಿದ್ಯಾವಂತ ದಲಿತ ಯುವಕರು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದು, ಪ್ರತಿಭಟಿಸಿ, ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದಾರೆ.
ನಮಗೆ ಗ್ರಾಮದ ಹೊಟೇಲ್ಗಳಲ್ಲಿ, ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ಕೇಳಿದ್ದಕ್ಕೆ ಬಂದ್ ಮಾಡಿಕೊಂಡು ತೆರಳಿದ್ದಾರೆ. ಇದು ಅಮಾನವೀಯವಾಗಿದ್ದು, ನಮಗೂ ಸಾಮಾ ಜಿಕ ನ್ಯಾಯ ನೀಡಿ ಎಂದು ಹಾಲವರ್ತಿಯಲ್ಲಿ ದಲಿತ ಯುವಕರು ಧ್ವನಿ ಎತ್ತಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಜನರು ಸಮಾನತೆಯ ಕೂಗಿಗೆ ಧ್ವನಿಗೂಡಿಸು ತ್ತಿಲ್ಲ. ಯಾಕೆ ನಾವು ಮನುಷ್ಯರಲ್ಲವೇ? ಎಂದು ಹಾಲವರ್ತಿ ಗ್ರಾಮದ ದಲಿತ ಯುವಕ ಚಾಮರಾಜ ನೋವಿನಿಂದ ಪ್ರಶ್ನಿಸಿದ್ದಾರೆ.
ಈ ಘಟನೆಯ ಕುರಿತಾಗಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದು ದಲಿತರಿಗೆ ಹೋಟೆಲ್ ಪ್ರವೇಶ ನಿರಾಕರಣೆ, ಕ್ಷೌರ ನಿಷೇಧದಂತಹ ಘಟನೆ ಸಹಿಸುವುದಿಲ್ಲ. ನಾನು ದಲಿತ ಮಂತ್ರಿಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಹಾಲವರ್ತಿ ಘಟನೆ ನನ್ನ ಗಮನಕ್ಕೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು.