ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಕುರಿತಂತೆ ಮುಂದಿನ ರಣತಂತ್ರ ರೂಪಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಚಾಣಕ್ಯ ಅಮಿತ್ ಶಾ ಅವರು ಭಾನುವಾರ ಮೈಸೂರಿನಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ಕಮಿಟಿ ಸಭೆ ನಡೆಸಲಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಂಬಂಧ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಈ ವೇಳೆ ಪಕ್ಷದ ಸಂಘಟನೆ ಕುರಿತಂತೆ ಸಭೆಗಳನ್ನೂ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಈ ಭೇಟಿ ವೇಳೆ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿ ಪಕ್ಷ ಸಭೆಗಳನ್ನು ನಡೆಸುವುದು ಈ ಮೊದಲು ನಿರ್ಧಾರವಾಗಿತ್ತು. ಬಳಿಕ ಸಮಯದ ಅಭಾವದ ಕಾರಣ ಬದಲಾವಣೆ ಮಾಡಲಾಯಿತು. ಇದೀಗ ಭಾನುವಾರ ಮೈಸೂರಿನಲ್ಲೇ ಪಕ್ಷದ ಸಭೆಗಳನ್ನು ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಆ ಪ್ರಕಾರ, ಭಾನುವಾರ ಮಧ್ಯಾಹ್ನ 3 ಗಂಟೆಗೆ ಮೈಸೂರು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಮೈಸೂರು ಕ್ಲಸ್ಟರ್ ನ ಪಕ್ಷದ ಬೂತ್ ಅಧ್ಯಕ್ಷರು ಹಾಗೂ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಅವರು ಮಾತನಾಡಲಿದ್ದಾರೆ. ಸುಮಾರು ಹತ್ತು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಸಲಿರುವ ಅಮಿತ್ ಶಾ ಅವರು ಲೋಕಸಭಾ ಚುನಾವಣೆಗೆ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರ, ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಬಗ್ಗೆ ರಾಜ್ಯ ನಾಯಕರಿಗೆ ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.