ಬೆಂಗಳೂರು : ಬಿಎಂಟಿಸಿ ಸೇವೆಯನ್ನು ಮತ್ತಷ್ಟು ಉತ್ತಮವಾಗಿಸಲು ಹೊಸ ಬಸ್‌ಗಳ ಖರೀದಿಯನ್ನು ಹೆಚ್ಚಿಸಲಾಗುತ್ತಿದ್ದು, ಎಲೆಕ್ಟಿಕ್ ಬಸ್‌ಗಳ ಸೇರ್ಪಡೆ ನಂತರ ಇದೀಗ ಹೊಸ ದಾಗಿ 820 ಡೀಸೆಲ್ ಬಿಎಸ್6 ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಪ್ರಸಕ್ತ ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಸೇರ್ಪಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಬಿಎಂಟಿಸಿಗೆ ಹಂತಹಂತವಾಗಿ 920ಕ್ಕೂ ಹೆಚ್ಚಿನ ಎಲೆಕ್ಟಿಕ್ ಬಸ್‌ಗಳ ಸೇರ್ಪಡೆಗೆ ಈಗಾಗಲೇ ಚಾಲನೆ ನೀಡಿದೆ.
ಹಾಗೆಯೇ, ಕೆಲದಿನಗಳ ಹಿಂದಷ್ಟೇ ಕೆಎಸ್ಸಾರ್ಟಿಸಿಗೆ 100 ಡೀಸೆಲ್ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಅದರ ಜತೆಗೆ ಇದೀಗ ಬಿಎಂಟಿಸಿಗೆ ಹೊಸದಾಗಿ 820 ಡೀಸೆಲ್ ಬಸ್ ಗಳನ್ನು ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಟೆಂಡರ್‌ಪ್ರಕ್ರಿಯೆ ನಡೆಸಲಾಗಿದೆ.
ಸಿದ್ಧಪಡಿಸಿರುವ ಟೆಂಡರ್ ದಾಖಲೆಯಲ್ಲಿನ ಷರತ್ತಿನಂತೆ ಗುತ್ತಿಗೆದಾರರು ಬಸ್ ಪೂರೈಕೆಗೆ ಕಾರ್ಯಾದೇಶ ಪಡೆದ 45 ದಿನಗಳಲ್ಲಿ 19 ಬಸ್‌ಗಳನ್ನು ಪೂರೈಸಬೇಕಿದೆ. ಅದಾದ ನಂತರ ಹಂತಹಂತವಾಗಿ ಬಸ್‌ಗಳನ್ನು ಪೂರೈಸಬೇಕಿದ್ದು, 210 ದಿನದ ಒಳಗಾಗಿ ಎಲ್ಲ 820 ಬಸ್‌ಗಳನ್ನು ನಿಗಮಕ್ಕೆ ನೀಡಬೇಕು ಎಂದು ಸೂಚಿಸಲಾಗುತ್ತಿದೆ.
ನೂತನವಾಗಿ ಪೂರೈಕೆಯಾಗುವ ಬಸ್‌ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಸಾಧನ, ಅಗ್ನಿ ಅವಘಡ ಮುನ್ಸೂಚನೆ ನೀಡುವ ಸಾಧನ, 3 ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗುತ್ತಿದೆ.