ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿ ತನಕ ದೇಶಾದ್ಯಂತ ಇವತ್ತು ನರೇಂದ್ರ ಮೋದಿಜೀ, ಬಿಜೆಪಿ ಮತ್ತು ಕಮಲ ಚಿಹ್ನೆ ಪರವಾದ ಅಲೆ ಇದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಿವೃತ್ತ ಕೆ.ಎ.ಎಸ್. ಅಧಿಕಾರಿ ಆರ್. ರುದ್ರಯ್ಯ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶ ಇವತ್ತು ಅತ್ಯಂತ ಭರವಸೆಯಿಂದ ನರೇಂದ್ರ ಮೋದಿಜೀ ಅವರ ನಾಯಕತ್ವದ ಬಿಜೆಪಿ ಕಡೆ ನೋಡುತ್ತಿದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 25 ಲೋಕಸಭಾ ಸೀಟು ಬಂದಿತ್ತು. ಅದನ್ನು ಮೀರಿ ಅದಕ್ಕಿಂತ ಹೆಚ್ಚು ಸೀಟುಗಳನ್ನು ಪಕ್ಷ ಗೆಲ್ಲಲಿದೆ ಎಂದರು. ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲೂ ಅತಿ ಹೆಚ್ಚು ಸೀಟು ಸಿಗಲಿದ್ದು, ಅಚ್ಚರಿಯ ಫಲಿತಾಂಶ ಲಭಿಸಲಿದೆ ಎಂದು ತಿಳಿಸಿದರು.
ಇದರ ಪ್ರಭಾವ ಕರ್ನಾಟಕದಲ್ಲೂ ಆಗಿದೆ. ಎಸ್‍ಸಿ, ಎಸ್‍ಟಿ ಸೇರಿದಂತೆ ಕಾಂಗ್ರೆಸ್ ಮತಬ್ಯಾಂಕಿನಂತಿದ್ದ ಎಲ್ಲ ಸಮುದಾಯಗಳು ಭ್ರಮನಿರಸನಗೊಂಡಿವೆ. ದಲಿತರ ಅಭಿವೃದ್ಧಿಗಾಗಿ ಕೊಟ್ಟಿದ್ದ ಸುಮಾರು 11,300 ಕೋಟಿ ಹಣವನ್ನು ಗ್ಯಾರಂಟಿ ಸ್ಕೀಮಿಗೆ ಕೊಟ್ಟರಲ್ಲವೇ? ಆ ಮೂಲಕ ದಲಿತರನ್ನು ವಂಚಿತರನ್ನಾಗಿ ಮಾಡಿದ್ದೀರಲ್ಲವೇ ಎಂದು ಕೇಳಿದರು. ರುದ್ರಯ್ಯ ದಕ್ಷ ಅಧಿಕಾರಿಯಾಗಿ ಸೇವೆ ಮಾಡಿದವರು. ಜನಪ್ರೀತಿ ಪಡೆದವರು ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಜೆಪಿ ಮಾಡಿದ ಸಾಧನೆ, ಅಭಿವೃದ್ಧಿ ಕಾರ್ಯವನ್ನು ಜನರಿಗೆ ತಿಳಿಸಬೇಕು. ಆಗ ಮಾತ್ರ ನಾವು ಗೆಲ್ಲಲು ಸಾಧ್ಯ ಎಂದು ತಿಳಿಸಿದರು. ಡಾ.ಅಂಬೇಡ್ಕರರನ್ನು ಕಾಂಗ್ರೆಸ್ ಸೋಲಿಸಿದ್ದು, ಅವರ ಪಾರ್ಥಿವ ಶರೀರಕ್ಕೆ ದೆಹಲಿಯಲ್ಲಿ ಜಾಗ ಕೊಡದ ಕುರಿತು ಜನರಿಗೆ ತಿಳಿಸಬೇಕು. ಅಂಬೇಡ್ಕರರನ್ನು ಅವಮಾನ ಮಾಡಿದವರಿಗೆ ಗೌರವ ಕೊಟ್ಟದ್ದನ್ನು ತಿಳಿಸಬೇಕು. ಪಂಚಕ್ಷೇತ್ರ ಅಭಿವೃದ್ಧಿ, ಭಾರತರತ್ನ ನೀಡಿದ್ದನ್ನು ನೆನಪಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕುಟುಂಬವನ್ನೇ ನೆಚ್ಚಿಕೊಂಡ ಪಕ್ಷ. ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡುವ ಪಕ್ಷ. ಕಾಂಗ್ರೆಸ್ಸಿಗೆ ಧಿಕ್ಕಾರ ಹಾಕಿದರೆ, ಆ ಪಕ್ಷದವರಿಗೆ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ನಮ್ಮ ಬೆಳವಣಿಗೆ ಆಗುತ್ತದೆ ಎಂದು ನುಡಿದರು.
ಸಂಸದ ಎಸ್. ಮುನಿಸ್ವಾಮಿ, ರಾಯಚೂರು ಜಿಲ್ಲಾ ಅಧ್ಯಕ್ಷ ಡಾ. ಶಿವರಾಜ್ ಪಾಟೀಲ್, ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿದರು. ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ ಸ್ವಾಗತ ಕೋರಿದರು.
ಗೂಗಲ್ ಸರ್ಚ್‌ನಿಂದ 5 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ವಂಚನೆಗೊಳಗಾದ ಮಹಿಳೆ | Online Scam
Shocking News: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲೇ ‘ಶಾಲಾ ವಾಹನ’ ಚಾಲನೆ: 16 ಚಾಲಕರ ವಿರುದ್ಧ ಕೇಸ್