ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ಕೆಲಸಗಳನ್ನು ಹೊರತುಪಡಿಸಿ ಪೌರಕಾರ್ಮಿಕರನ್ನು ಬೇರೆ ಕೆಲಸಗಳಿಗೆ ನಿಯೋಜಿಸುವಂತಿಲ್ಲ ಎಂದು ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರೆ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿರುವ ಬಗ್ಗೆ ನಿರ್ದೇಶನಾಲಯಕ್ಕೆ ಹಲವಾರು ದೂರುಗಳು ಬಂದಿವೆ. ಈ ಹಿನ್ನೆಲೆ, ಪೌರಾಡಳಿತ ನಿರ್ದೇಶನಾಲಯ ಈ ಆದೇಶ ಹೊರಡಿಸಿದೆಯಾಗಿದೆ.
ಒಂದು ವೇಳೆ ಸರ್ಕಾರದ ಆದೇಶದ ಮೇರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಬೇರೆ ಕೆಲಸಗಳಿಗೆ ನಿಯೋಜನೆ ಮಾಡಿದವರಿಗೆ ಮತ್ತು ಅವರಿಂದ ಸೇವೆ ಪಡೆದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆಯೇ, ಇತರೆ ಯಾವುದೇ ಅನ್ಯ ಕೆಲಸಗಳಿಗೆ ನಿಯೋಜಿಸದಂತೆ ಇಲಾಖೆ ಕಟ್ಟುನಿಟ್ಟಾಗಿ ಸೂಚಿಸಿದೆ. ಪೌರಕಾರ್ಮಿಕರನ್ನು ಅವರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೆ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಒಂದು ವೇಳೆ ಪೌರಕಾರ್ಮಿಕರಿಗೆ ನಿಗದಿಪಡಿಸಿದ ಕರ್ತವ್ಯಗಳನ್ನು ಹೊರತುಪಡಿಸಿ ಇತರೇ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುವುದು ಕಂಡು ಬಂದಲ್ಲಿ ಅಥವಾ ನಿರ್ದೇಶನಾಲಯಕ್ಕೆ ದೂರು ಸ್ವೀಕೃತವಾದಲ್ಲಿ, ಅನ್ಯ ಕಾರ್ಯಗಳಿಗೆ ನಿಯೋಜಿಸಿದ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಯನ್ನು ಮತ್ತು ಅವರ ಸೇವೆಯನ್ನು ಪಡೆಯುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ತಿಳಿಸಿದೆಯಾಗಿದೆ.