ಮಂಗಳೂರು : ಮಂಗಳೂರು ಮುಂಬಯಿ ನಡುವೆ ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಸಂಚರಿಸುತ್ತಿರುವ ರೈಲು ಮತ್ಸ್ಯಗಂಧ ಎಕ್ಸ್ಪ್ರೆಸ್. ಈ ಎರಡು ಕರಾವಳಿ ನಗರಗಳನ್ನು ಬೆಸೆಯುವ ಹಾಗೂ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಪ್ರಯಾಣಿಸುವ ರೈಲು ಎಂದೇ ಇದು ಖ್ಯಾತಿ ಪಡೆದಿದೆ.
1998ರ ಮೇ 1ಕ್ಕೆ ಆರಂಭಗೊಂಡ ಈ ರೈಲಿನ ಮೊದಲ ಹೆಸರು ಮಂಗಳೂರು ಕುರ್ಲಾ ಎಕ್ಸ್ಪ್ರೆಸ್ ಆಗಿತ್ತು.ಪ್ರಸ್ತುತ ಲೋಕಮಾನ್ಯ ತಿಲಕ್ ಟರ್ಮಿನಸ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಓಡುತ್ತಿರುವ ಈ ರೈಲನ್ನು (ನಂ. 12619/12620) ಅವಲಂಬಿಸಿರುವ ಕರಾವಳಿಯ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ರೈಲು ತೀರಾ ಹಳೆಯ ಬೋಗಿಗಳೊಂದಿಗೆ ಕಾರ್ಯಾಚರಿಸುತ್ತಿದೆ. ಅದೇ ಬೋಗಿಯನ್ನೇ ಹಲವು ಬಾರಿ ಜೀರ್ಣೋದ್ಧಾರ ಮಾಡಿದ್ದರೂ ಕೋಚ್ಗಳ ಸ್ಥಿತಿ ಮಾತ್ರ ಕ್ಷೀಣಿಸುತ್ತಲೇ ಇದೆ. ಪ್ರಸ್ತುತ ಹಳೇ ಐಸಿಎಫ್ ಬೋಗಿಗಳು ಇದರಲ್ಲಿವೆ. ಇವುಗಳೆಲ್ಲವೂ 25 ವರ್ಷ ಗಳಷ್ಟು ಹಳೆಯವಾದ್ದರಿಂದ ಅಲ್ಲಲ್ಲಿ ಕಿತ್ತು ಹೋಗಿವೆ. ಶೌಚಾಲಯಗಳನ್ನು ಬಯೋ ಟಾಯ್ಲೆಟ್ ಆಗಿ ಬದಲಾಯಿಸಲಾಗಿದ್ದರೂ ಟಾಯ್ಲೆಟ್ ಕೊಠಡಿಗಳು, ಗೋಡೆ ಇತ್ಯಾದಿ ಸುಧಾರಣೆ ಬಯಸುತ್ತಿವೆ. ಪ್ರಮುಖವಾಗಿ ಮಂಗಳೂರು- ಮುಂಬಯಿ ಮಧ್ಯೆ ಪ್ರವಾಸಿಗರು, ಕುಟುಂಬದವರು ಸಂಚರಿಸುವ ರೈಲಿದು. ಹಾಗಾಗಿ ಸಂಪೂರ್ಣವಾಗಿ ರೈಲನ್ನು ಸುಧಾರಣೆಗೊಳಪಡಿಸಬೇಕು ಎಂಬ ಬೇಡಿಕೆ ಪ್ರಯಾಣಿಕರ ವಲಯದಿಂದ ಕೇಳಿ ಬರುತ್ತಲೇ ಇದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ರೈಲ್ವೇ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಲಾಗುತ್ತಿದೆ. ಆದರೂ ಸುಧಾರಣೆಯಾಗಿಲ್ಲ. ಮತ್ಸéಗಂಧ ರೈಲಿಗೆ ತ್ವರಿತವಾಗಿ ಎಲ್ಎಚ್ಬಿ (ಲಿಂಕ್ ಹಾಫ್ಮನ್ ಬುಶ್) ಕೋಚ್ ಆದ್ಯತೆ ಮೇರೆಗೆ ನೀಡಬೇಕಾದ ಆವಶ್ಯಕತೆ ಇದೆ ಎನ್ನುತ್ತಾರೆ ಪಶ್ಚಿಮ ಕರಾವಳಿ ರೈಲ್ವೇ ಅಭಿವೃದ್ಧಿ ಸಮಿತಿಯ ಸಲಹೆಗಾರ ಅನಿಲ್ ಹೆಗ್ಡೆ. ಎಲ್ಎಚ್ಬಿ ಕೋಚ್ಗಳು ಜರ್ಮನ್ ವಿನ್ಯಾಸದ್ದಾಗಿದ್ದು, ನಿರ್ವಹಣೆಗೆ ಸುಲಭ ಮತ್ತು ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುವಂತೆ ನಿರ್ಮಿತವಾಗಿವೆ. ಇದರಿಂದ ರೈಲ್ವೇಗೂ ಲಾಭವಿದೆ. ಹಾಗಾಗಿ ಗರಿಷ್ಠ ಸಂಖ್ಯೆಯ ಜನ ಪ್ರಯಾಣಿಸುವ ಮತ್ಸ್ಯಗಂಧ ಎಕ್ಸ್ ಪ್ರಸ್ಸನ್ನು ಸುಧಾರಣೆ ಪಡಿಸಬೇಕು ಎನ್ನುವುದು ರೈಲ್ವೇ ಪ್ರಯಾಣಿಕರ ಬೇಡಿಕೆಯಾಗಿದೆ.