ಒಂದು ದೇಶ ಒಂದು ಚುನಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಮೂರು ಕಾನೂನುಗಳನ್ನು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲು ಸಲಹೆ ನೀಡುವಂತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ನೇಮಕವಾದ ಸಮಿತಿ ಜನರಲ್ಲಿ ಕೇಳಿಕೊಂಡಿದೆ. ಸಾರ್ವಜನಿಕರು ಜನವರಿ 15 ರ ಒಳಗಡೆ ಸಲಹೆಯನ್ನು ಲಿಖಿತವಾಗಿ ಬರೆದು ಪೋಸ್ಟ್ ಮಾಡಬಹುದು ಅಥವಾ sc-hlc@gov.in ಗೆ ಇಮೇಲ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು.
ಈ ಬಗ್ಗೆ ಜಾಹಿರಾತು ನೀಡಲಾಗಿದ್ದು, ಜನರು ನೀಡಿದ ಎಲ್ಲಾ ಸಲಹೆಯನ್ನು ಸಮಿತಿಯ ಮುಂದೆ ಇಡಲಾಗುತ್ತದೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯ ಉಲ್ಲೇಖದ ನಿಯಮಗಳ ವಿವರಗಳು ಮತ್ತು ತಜ್ಞರ ಸಂಸ್ಥೆಗಳ ವರದಿಗಳನ್ನು www. onoe.gov.in/onoe reports ವೆಬ್‍ಸೈಟ್‍ನಲ್ಲಿ ನೋಡಬಹುದು. ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯ ಸಾಧಕ, ಬಾಧಕ ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಿದೆ. ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಶಾ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಮತ್ತು ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್‍ಕೆ ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಸಿ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಸದಸ್ಯರಾಗಿದ್ದಾರೆಯಾಗಿದೆ.