ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಎಲ್ಲಾ ಸಿಬ್ಬಂದಿಗಳ ಕುಟುಂಬದ ಸದಸ್ಯರನ್ನು ಗೌರವಿಸಿದ ಸಾರಿಗೆ ಸಚಿವರು, ಅಪಘಾತದಲ್ಲಿ ಮೃತಪಟ್ಟ ಒಟ್ಟು 12 ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳ ಅವಲಂಬಿತರಿಗೆ ತಲಾ 1 ಕೋಟಿ ರೂ.ಗಳ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಇಂದು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಸಾಂಕೇತಿಕ ಅಪಘಾತದಲ್ಲಿ ಮೃತ ಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ 1 ಕೋಟಿಯ ಪರಿಹಾರ ಮೊತ್ತವನ್ನು ವಿತರಿಸಿದರು ಅಲ್ಲದೆ ಸೀರೆ ಮತ್ತು ಸಿಹಿಯನ್ನು ನೀಡಿ ಗೌರವಿಸಿದರು.
ಮೃತರನ್ನು ಕಳೆದುಕೊಂಡ ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಪರಿಹಾರದ ಮೊತ್ತದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಮಾಡಿಕೊಂಡು ಯಾರನ್ನು ಅವಲಂಬಿಸದೆ ಬದುಕು ನಡೆಸಬಹುದಾಗಿದೆ ಎಂದರು.
ಈ ಹಿಂದೆ ಅಪಘಾತ ಸೇರಿದಂತೆ ಇತರ ಕಾರಣಗಳಿಂದ ಮೃತಪಟ್ಟ ಕುಟುಂಬದವರಿಗೆ ರೂ. 3 ಲಕ್ಷ ಗಳನ್ನು ಮಾತ್ರ ನೀಡಲಾಗುತ್ತಿತ್ತು. ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆಯಡಿ ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇರೀತಿ, ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ರವರೊಂದಿಗೆ ರೂ.50 ಲಕ್ಷ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರ ಕಾರ್ಪೋರೇಟ್ ವೇತನ ಪ್ಯಾಕೇಜ್‍ನಡಿ ರೂ.50 ಲಕ್ಷದಂತೆ ಒಟ್ಟು ರೂ 1 ಕೋಟಿ ಪರಿಹಾರ ನೀಡಲಾಗುತ್ತಿದೆ.
ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕರಾರಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು, ತದನಂತರ ಇತರೆ ನಿಗಮಗಳಲ್ಲಿಯೂ ಜಾರಿಗೊಳಿಸಲಾಗಿದೆ. ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಇದುವರೆವಿಗೂ 09 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್, ಭಾ.ಆ.ಸೇ, ನಿರ್ದೇಶಕರು (ಸಿ ಮತ್ತು ಜಾ), ಡಾ. ನಂದಿನಿ ದೇವಿ ಕೆ, ಭಾ.ಆ.ಸೇ, ಸೇರಿದಂತೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬ ವರ್ಗ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.